Anant Vaidya

Anant Vaidya

Thursday, August 13, 2020

ಹೆಸರಿಗೂ ಪುರಾಣವೇ?

 

Kavita Gireesh

 

"ಹೆಸರಿಗೂ ಪುರಾಣವೇ"

      

ಪಕ್ಕದ ಮನೆಯಲ್ಲಿ ನಾಮಕರಣ

 

ನಾಮಕರಣ ಅಂತ ಪಕ್ಕದಮನೆ ನಾರ್ತ್ ಇಂಡಿಯನ್ ಫ್ಯಾಮಿಲಿಯವರು ಬೆಳ್ಳಂಬೆಳಗ್ಗೆ ಕರೆಯಲು ಬಂದಿದ್ದರು.

‘ನಮ್ಮ ಮನೆಗೆ ಲಕ್ಷ್ಮೀ ಬಂದಿದ್ದಾಳೆ’ ಅಂತ ತುಂಬಾ ಖುಷಿಯಾಗಿ ಹೇಳಿದರು. 

“ಸಿಯಾ, ನಾಮ ಸೋಛಾ ಹೈ, ಆಪ್ ಸಬ್ ಕೊ ಜರೂರ್ ಆನಾ ಹೈ’.. ಪಟ ಪಟ ಅಂತ  ಹೇಳುತ್ತಲೇ ಇದ್ದರು….

ಅವರ ಖುಷಿ ನೋಡಿ ನಮಗೂ ತುಂಬಾ ಸಂತೋಷವಾಯಿತು.  

ಮಗುವನ್ನು ನೋಡಬೇಕು ಅಂತ ಆಸೆನೂ ಆಯಿತು. ‘ಖಂಡಿತ ಬರ್ತೀವಿ’ ಅಂತ ಹೇಳಿದೆವು.

 

ಇವತ್ತೇ ನಾಮಕರಣ! ಹೋಗಿ ಬರಬೇಕು…

ಏನು ಉಡುಗೊರೆ ನೀಡಲಿ ಅಂತ ಯೋಚಿಸುತ್ತ ಸ್ನಾನಮುಗಿಸಿ ಬಂದೆ.

‘ನನಗೆ  ಆಫೀಸಿನಲ್ಲಿ ಮುಖ್ಯ ಮೀಟಿಂಗ್ ಇದೆ. ನೀನು ಹೋಗಿ ಬಾ, ನಾನು ಬರೋದು ಲೇಟ್ ಆಗತ್ತೆ’ ಎಂದು ನನ್ನ ಪತಿ ಹೇಳಿದ್ದರಿಂದ, ನಾನೊಬ್ಬಳೇ ನಾಮಕರಣಕ್ಕೆ ಹೋಗುವುದು ಅಂತ ತೀರ್ಮಾನ ಆಯಿತು.

ಬೇಗ ಹೋಗಿ ಬೇಗ ಬಂದು ಬಿಡಬೇಕು ಅಂದುಕೊಂಡು ಕಪಾಟಿನಿಂದ ಹಸಿರು ಬಣ್ಣದ ಸೌತ್ ಸಿಲ್ಕ್ ಸೀರೆ ತೆಗೆಯುವಾಗ  ಅನಿಸಿತು… ನಾರ್ತ್ ಇಂಡಿಯನ್ಸ್ ಇಷ್ಟು ಭಾರಿ ಸೀರೆ ಉಡುವುದಿಲ್ಲ, ಇಷ್ಟವನ್ನೂ ಪಡೋದಿಲ್ಲ. ಅಲ್ಲೇ ಪಕ್ಕದಲ್ಲಿದ್ದ ನೀಲಿ ಬಣ್ಣದ ಕಾಥಾ ಸ್ಟಿಚ್ ಸೀರೆ ಸಾಕು ಅಂತ ಅದನ್ನ ಉಟ್ಟಿಕೊಂಡು, ಒಂದೆಳೆ ಮುತ್ತಿನ ಸರ ಧರಿಸಿ ರೆಡಿಯಾಗಿ ಹೊರಟಾಗ ಹನ್ನೊಂದು ಘಂಟೆ!

 

ತುಂಬಾ ವಿಜೃಂಭಣೆಯ ನಾಮಕರಣ.

 

ಅವರು ಮನೆಯನ್ನೆಲ್ಲ  ತಿಳಿ ಗುಲಾಬಿ ಬಣ್ಣದಲ್ಲಿ ಅಲಂಕಾರ ಮಾಡಿದ್ದರು. ತೊಟ್ಟಿಲನ್ನಂತೂ ತುಂಬಾ ಶ್ರದ್ಧೆಯಿಂದ ಅಲಂಕರಿಸಿದ್ದರು. ತೊಟ್ಟಿಲಲ್ಲಿರುವ ಮಗು ತುಂಬಾ ಮುದ್ದಾಗಿತ್ತು. ರಾತ್ರಿಯೆಲ್ಲಾ ಎದ್ದಿತ್ತೇನೋ? ಈಗ ಇಷ್ಟು ಗಲಾಟೆಯಲ್ಲೂ ಶಾಂತವಾಗಿ ಮಲಗಿತ್ತು. ರಾತ್ರಿಯೆಲ್ಲಾ ಎಚ್ಚರವಿದ್ದು ಹಗಲಿಗೆ ಮಲಗುವ ಶಿಶು ಇರಬೇಕು!

 

ಸಿಯಾ ಅಲ್ಲ ದಿಯಾ!

 

ಮಗುವಿನ ಅಮ್ಮನಿಗೆ ನಾನು ತೆಗೆದು ಕೊಂಡು ಹೋದ ಉಡುಗೊರೆ ನೀಡಿ, ನನಗೆ ತಿಳಿದ ಅಲ್ಪ ಸ್ವಲ್ಪ ಹಿಂದಿಯಲ್ಲಿ ಏನು ಹೆಸರಿಟ್ಟಿದೀರಾ ಅಂತ ಕೇಳಿದೆ.  "ದಿಯಾ" ಅಂತ ಹೇಳಿದಳು… ‘ಒಹ್! ಬೇರೆ ಹೆಸರು ಇಟ್ಟಿದ್ದೀರಾ’? "ಸಿಯಾ ಅಂತ ಇಡ್ತೀವಿ ಅಂತ ನಿಮ್ಮ ಮನೆಯವರು ಕರೆಯಲು ಬಂದಾಗ ಹೇಳಿದ್ದರು. ಅದಕ್ಕೇ ಕೇಳಿದೆ” ಎಂದೆ. ನಮ್ಮ ದೇಶದಲ್ಲಿ ನಾವು ಅಪರಿಚಿತರಾದರೂ, ಬೇರೆ ದೇಶದಲ್ಲಿ ನಮ್ಮ ದೇಶದ ಜನರು ಯಾರಾದರೂ ಸ್ನೇಹಿತರೇ! ದೇಶದ ಕರುಳ ಬಳ್ಳಿ ಸೆಳೆಯದಿರುವುದೇ? ಸೌಜನ್ಯದ ಪ್ರೀತಿ ಉಕ್ಕೇರುವುದು ಸಹಜ ತಾನೇ? ಸುಖ-ದುಃಖ ಹಂಚಿಕೊಳ್ಳುವುದು ಇರುತ್ತದೆಯಲ್ಲವೇ? ಒಂದಿಷ್ಟು ಮಾತನಾಡಿದೆ.     

 

ಸಿಯಾ ಅಂದ್ರೆ ಸೀತೆಯ ಇನ್ನೊಂದು ಹೆಸರಂತೆ! ‘ಆ ಹೆಸರಿಟ್ಟರೆ ಮಗುವಿಗೆ ಸೀತೆ ಅನುಭವಿಸಿದಷ್ಟೇ ಕಷ್ಟ ಜೀವನದಲ್ಲಿ ಬರುತ್ತದೆ. ಅದಕ್ಕಾಗಿ ಆ ಹೆಸರು ಬೇಡ ಅಂದ್ರು’… ನಮ್ಮತ್ತೆ!! ಅದಕ್ಕೆ ‘ದಿಯಾ’ ಅಂತ ಹೆಸರು ಇಟ್ಟಿದೀವಿ ಅಂತ ನಗುತ್ತಾ ಹೇಳಿದಳು.

 

ಸ್ವ-ಯೋಚನಾ ಲಹರಿ…..

 

ಅವರು ಹೆಸರು ಬದಲಿಸಿದ, ಕಾರಣ ಕೇಳಿದಾಗ ನನ್ನ ಮನಸ್ಸು ಮೊದಲಿನಷ್ಟು ತಿಳಿಯಾಗಿರಲಿಲ್ಲ. ಊಟ ಮುಗಿಸಿ ಅವರ ಮನೆಯಿಂದ ವಾಪಾಸ್ ಬಂದರು… ಏನೋ ಗೊಂದಲ. ತಳಮಳ. ಹೇಳಿಕೊಳ್ಳಲಾಗದ ಭಾವಸ್ಪಂದನ…. ಮನದಲ್ಲೇನೋ ಸುನಾಮಿ, ಬಿರುಗಾಳಿ… ಯಾಕೋ ಆ ವಿಷಯ ತಲೆಯಿಂದ ಹೋಗುತ್ತಲೇ ಇರಲಿಲ್ಲ. 

 

ಮನಸ್ಸು ಅವರು ಮಾಡಿದ್ದು ಸರಿ ಅಂದರೆ… ಬುದ್ಧಿ ಯಾಕೋ, ‘ಹೆಸರಿನಿಂದ ಬದುಕಲ್ಲಿ ತೊಂದರೆಯೇ’ ಅಂತ ಪ್ರಶ್ನಿಸುತ್ತಿತ್ತು!… ಮನಸ್ಸು, ಬುದ್ಧಿ ಎರಡನ್ನು ಮೀರಿ ನನ್ನ ವಿಚಾರ ಮಾತ್ರ ಸೀತೆಯ ಜೀವನದ ಸುತ್ತ ಸುತ್ತುತ್ತಿತ್ತು…

 

ಭೂಮಿ ತೂಕದ ಹೆಣ್ಣೇ ಸೀತೆ!

 

ಮಹಾಮಾತೆ ಸೀತಾದೇವಿಯನ್ನು ‘ಭೂಮಿಯಲ್ಲಿ ಹುಟ್ಟಿ ಬಂದ ನೀನು ಭೂಮಿ ತೂಕದ ಹೆಣ್ಣೆಂದರು’!…. 

ಅವಳು ಆ ಮಾತು ಸುಳ್ಳಾಗದಿರಲೆಂದು ಪೂರ್ತಿ ಜೀವನವನ್ನು ಕಷ್ಟದಲ್ಲೇ ಕಳೆದಳೇನೋ…? ಭೂಮಿಯಂತೆ ಸಹನಾ ಜೀವಿಯಾದಳೇನೋ…? ತನ್ನ ಭಾವನೆಗಳನ್ನೇ ಕೊಂದು ಬದುಕಿದಳೇನೋ…?

 

ಭೂಮಿ ಊಳುವಾಗ ನೇಗಲಿನ ಸಾಲಿನಲ್ಲಿ ಸಿಕ್ಕ ಮಗು, ಜನಕ ಮಹಾರಾಜನ ಸಾಕು ಮಗಳು... ಆಗೇನೂ ತಿಳಿಯದ ಶಿಶು ಅವಳು.  ಆದರೆ  ಜನರ ಬಾಯಲ್ಲಿ ಅವಳ ಕಥೆ ಶುರುವಾಗಿತ್ತಲ್ಲ! ಬೆಳೆಯುತ್ತ, ಬೆಳೆಯುತ್ತ ಅದೆ ಕಥೆಯನ್ನೇ ತಾನೂ ಕೇಳುತ್ತ ಬೆಳೆದಳೇ? ಅರಮನೆಯ ಆ ಕಥೆಯನ್ನು ದಾಸಿಯರೆಲ್ಲ ಹೇಳುವುದು. ಅದು ಅವಳ ಕಿವಿಯನ್ನು ತಲುಪಿದಾಗ ಅವಳ ಮನಸ್ಸು ಭಾರವಾಗಿರಬಹುದೇ? ಅವಳ ಭೂಮಿ ತೂಕದ ಹೆಣ್ಣಿನ ಪಾತ್ರ ಅಲ್ಲಿಂದಲೇ ಶುರು ಆಗಿರಬಹುದೇ? ಸಹನಾ ಮೂರ್ತಿಯವಳು!

 

ಸೀತಾ ಕಲ್ಯಾಣ

 

ಸೀತೆಯ ಮದುವೆಯ ಸಂಭ್ರಮ... ಸೀತೆಗೂ ಅಷ್ಟೇ  ಹರ್ಷವಿತ್ತೇ? ಸೀತೆಯ ಗಂಡನಾಗುವವನು ಶಿವಧನಸ್ಸು ಹೆದೆಯೇರಿಸ ಬೇಕೆಂದು ಅವಳ ಅಪ್ಪ ಜನಕನು ಪಣವಿಟ್ಟಿದ್ದನಂತೆ! ಸ್ವಯಂವರ ಅವಳಿಗಿಷ್ಟ ಇತ್ತೇ? ಶಿವಧನಸ್ಸನ್ನು ಹೆದೆಯೇರಿಸಿ ಗೆದ್ದೆನೆಂದು ಬೀಗಲು, ತಾನೇ ಬಲಿಷ್ಠ, ವೀರ ಪ್ರಚಂಡನೆಂದು ತೋರಿಸಲು, ರಾವಣನಂಥ ಕ್ರೂರ ರಾಕ್ಷಸ  ಬಂದಿದ್ದನ್ನು ತಿಳಿದು ಅವಳ ಕೋಮಲ ಮನಸ್ಸು ಭಯ ಪಟ್ಟಿರಬಹುದೇ? ಅಲ್ಲಿಂದ ಅವಳಿಗೆ ಸಾಧ್ವಿಯ ಪಟ್ಟವೇ? ಸಾಧ್ವಿ ಎನ್ನುವುದು ಇತರರು ತೊಡಿಸುವ ಮುಖವಾಡವೇ?

 

ಸೀತಾರಾಮ ಕಲ್ಯಾಣ ಉತ್ಸವವಂತೆ..

 

ಸೀತೆಯನ್ನು ವರಿಸಲು ಪಣವಾಗಿ ಇಟ್ಟ ಶಿವ ಧನಸ್ಸನ್ನು ಹೆದೆಗೇರಿಸಲು ರಾಕ್ಷಸ ರಾವಣನಿಂದ ಸಾಧ್ಯವಾಗಲಿಲ್ಲ! ಬಂದ ಯಾವೊಬ್ಬ ಅರಸರಿಂದಲೂ ಪಣವನ್ನು ಗೆಲ್ಲಲು ಆಗಿಲ್ಲ! ಅದಷ್ಟರಿಂದ ಅವಳಿಗೆ ಎನೋ ತೃಪ್ತಿಯಾಗಿರ ಬಹುದೇ? ರಾಮನು ಶಿವಧನಸ್ಸನ್ನು ಹೆದೆಯೇರಿಸುವಾಗ ಮುರಿದನೆಂದು, ಪಂದ್ಯ ಗೆದ್ದನೆಂದು ಖುಷಿಯಲ್ಲಿದ್ದ ಸೀತೆಗೆ ಮತ್ತದೇ ಅವಳ ಹುಟ್ಟಿನ ಪ್ರಶ್ನೆ ಕಾಡಿತ್ತೆ? 

 

ದಶರಥ ಮಹಾರಾಜನು ಜನಕನ ಔರಸಪುತ್ರಿ  ಊರ್ಮಿಳೆಯನ್ನು ಲಕ್ಷ್ಮಣನಿಗೂ, ಜನಕನ ತಮ್ಮ ಕುಶಧ್ವಜನ ಮಕ್ಕಳಾದ ಮಾಂಡವಿಯನ್ನು ಭರತನಿಗೂ, ಶೃತಕೀರ್ತಿಯನ್ನು ಶತ್ರುಘ್ನನಿಗೂ ತಂದುಕೊಳ್ಳಲು ಒಪ್ಪಿದನಂತೆ! ಸೀತೆಯ ಮೂವರು ತಂಗಿಯರನ್ನು ಸೊಸೆಯಂದಿರನ್ನಾಗಿಸಿಕೊಳ್ಳಲು ದಶರಥನ ವಿರೋಧವಿಲ್ಲವಂತೆ! ಆದರೆ ಸೀತೆ ಔರಸ ಪುತ್ರಿಯಲ್ಲವಲ್ಲ!! ಜನಕನು ಸಾಕಿದ್ದಕ್ಕೆ ಇವಳು ಮಗಳು! ಅವರು ತಂಗಿಯರು!!

 

‘ನನ್ನ ರಾಮನಿಗೆ ಔರಸ ರಾಜಕುವರಿಯೇ ಬೇಕು. ಹುಟ್ಟಿನ ಮೂಲವಿಲ್ಲದ ಹೆಣ್ಣನ್ನು ನನ್ನ ರಾಮನ ಮಡದಿಯಾಗಿ ನಾನು ಸ್ವೀಕರಿಸಲಾರೆ’ ಎಂದು ಹೇಳಿದ್ದು ಸತ್ಯವಿರಬಹುದೇ?! ಅವಳು ಜನಕನ ಮಗಳಲ್ಲವೆಂದು ತಿರಸ್ಕರಿಸಿದ್ದು ಅವಳ ಬದುಕಿನಲ್ಲಿ ಆರದ ಮೊದಲ ಗಾಯವಾಗಿರಬಹುದೇ? ದಶರಥ ಹೀಗೆ ಹೇಳಿದನಂತೆ ಎಂಬ  “ಗಾಳಿಸುದ್ದಿ”ಯನ್ನು ಕೇಳಿ ಅವಳಿಗೆ ಉಸಿರು ಕಟ್ಟಿದಂತಾಗಿರಬಹುದೇ? ಕತ್ತನ್ನು ಹಿಚುಕಿದಂತಾಗಿರ ಬಹುದೇ?

 

ಮತ್ತೆ ಹೇಗೆ ಒಪ್ಪಿದ ದಶರಥ? ಕಡುಕೋಪಿ ವಿಶ್ವಾಮಿತ್ರನ ಭಯವೇ? ಆತನೇ ತೋರಿಸಿದ್ದ ಮಿಥಿಲೆಯ ದಾರಿಯನ್ನು! ವಿಶ್ವಾಮಿತ್ರನೇ ಜನಕನಿಗೆ ಹೇಳಿದ್ದ…. ‘ರಾಮನಿಗೆ ಶಿವಧನುವನ್ನು ತೋರಿಸು’ ಎಂದು! ‘ರಾಮನಿಗೆ ಶಿವಧನುವನ್ನು ಹೆದೆಯೇರಿಸು’ ಎಂದವನೂ ವಿಶ್ವಾಮಿತ್ರನೇ? ಹೆದೆಯೇರಿಸುವಾಗ ಶಿವಧನುವು ಮುರಿದು ಹೋಯಿತು. ಅದೇನು ಇಟ್ಟು-ಇಟ್ಟು ಗೆದ್ದಲು ಹಿಡಿದಿತ್ತೇ? ಏನಿದು ವಿಚಿತ್ರ!?

 

‘ಧನಸ್ಸು ಮುಟ್ಟುವ ಮೊದಲೇ ಅವಳ ಮದುವೆಯಾಗಲು ನಾನು  ಒಪ್ಪಿದಂತೆ, ಧನಸ್ಸು ಮುರಿದ ಮರುಕ್ಷಣ ಅವಳು ನನ್ನ ಪತ್ನಿ’ ಅಂದ ರಾಮ. ಮುದ್ದು ಮಗನ  ಮಾತಿಗೆ ಸೊಸೆಯೆಂದು ಒಪ್ಪಿಕೊಂಡನೇ ದಶರಥ?... ರಾಮ ಕರ್ತವ್ಯ, ಧರ್ಮ, ಕೊಟ್ಟ ಮಾತಿಗೆ ಬದ್ಧನಾಗಷ್ಟೇ ಮದುವೆಯಾದನೇ ಸೀತೆಯನ್ನು??? 

 

ಖುಷಿ ಪಡುವ ಸಮಯದಲ್ಲಿ ಹರ್ಷವ ತೋರಿಸದ, ಕೋಪದ ಸಮಯದಲ್ಲಿ  ಕೋಪವನ್ನೂ ತೋರಿಸದ ಎಲ್ಲ ಸಮಯದಲ್ಲೂ ನಿರ್ಲಿಪ್ತನಾಗಿರುವ ಮರ್ಯಾದಾ ಪುರುಷೋತ್ತಮ ಗಂಡನ ಜೊತಯಲ್ಲಿ ಸಲಿಗೆಯಿಂದಿರಲು ಸಾಧ್ಯವಿತ್ತೇ?? ರಾಮನೊಂದಿಗೆ ಅವಳು ಸರಸ ದಾಂಪತ್ಯವನ್ನು ನಡೆಸಿದ್ದಳೇ??

ಸರಸ ದಾಂಪತ್ಯವಿಲ್ಲದೇ ಸಂತೋಷದಿಂದ ಬಾಳಲು ಸಾಧ್ಯವೇ? ಹೇಗಿತ್ತೋ ಅವಳ ಆ ದಿನಗಳು?? 

ಮೌನಿಯಾಗಿರುವುದರಿಂದಲೇ ಅವಳನ್ನು ಎಲ್ಲರೂ  ಸರ್ವಗುಣಸಂಪನ್ನೆ ಎಂದರೇನೋ...?

 

ವನವಾಸದಲ್ಲೂ ಜೊತೆಯಾದವಳು..

 

 ‘ಭರತನಿಗೆ ಪಟ್ಟ, ರಾಮನಿಗೆ ಹದಿನಾಲ್ಕು ವರ್ಷ ವನವಾಸ’ ವಿಧಿಸಬೇಕೆನ್ನುವುದು ಕೈಕಯಿಯ ಹಟವಂತೆ… ಮಾವನಾದ ದಶರಥ ಕೊಟ್ಟ ಮಾತಂತೆ. ವಂಶದಲಿ ಕೊಟ್ಟ ಮಾತು ನೆಡೆಯಲೇ ಬೇಕೆಂದು ರಾಮ ವನವಾಸಕ್ಕೆ ಹೊರಟು ನಿಂತಾಗ, ಸೀತೆ ತಾನೂ ಗಂಡನ ಜೊತೆಯಾಗಿ ಹೋದಳು... ತನ್ನ ಸುಖದ ಸುಪ್ಪತ್ತಿಗೆಯ ತೊರೆದು ಗಂಡನ ಜೊತೆ ಹೊರಟ ಸೀತೆಗೆ ವನವಾಸದ ಕಷ್ಟ ತಿಳಿದಿರಲಿಲ್ಲವೇ? ವನ್ಯಮೃಗಗಳ, ಕ್ರೂರ ರಕ್ಕಸರ ನೆನೆದು ಹೆದರಲಿಲ್ಲವೇ ಅವಳ ಮನ??

 

ಲಕ್ಷ್ಮಣನ ಪತ್ನಿ ಊರ್ಮಿಳೆಯಂತೆ ಅರಮನೆಯಲ್ಲೇ ಉಳಿದಿದ್ದರೆ… ಸೀತೆಯನ್ನು ಸೀತಾಮಾತೆ ಅನ್ನುತ್ತಿರಲಿಲ್ಲವೇ ನಾವೆಲ್ಲ?? ಊರ್ಮಿಳೆಗೆ ಗಂಡನ ಸೇವೆ ಮಾಡುವ ಭಾಗ್ಯವೂ ತಪ್ಪಿತು. ಇತ್ತ ಮಾವನ ಸೇವೆ ಮಾಡುವ ಯೋಗವೂ ತಪ್ಪಿತು!

 

‘ರಾಮನೇನೋ  ಅಪ್ಪನ ಮಾತು ಉಳಿಸಲು ಹೋದ.. ಸೀತೆಯು ವೃದ್ಧ ಅತ್ತೆ, ಮಾವನ ಸೇವೆ ಮಾಡದೇ ಪತಿಯ ಜೊತೆಗೇಕೆ ಹೋದಳೋ’? ಎಂದು, ಜರಿದ ಜನರೂ ಇರಬಹುದೇ?? ಅದಕ್ಕೇ ಲಕ್ಷ್ಮಣ ಊರ್ಮಿಳೆಯನ್ನು ಅಯೋಧ್ಯೆಯಲ್ಲಿಯೇ ಬಿಟ್ಟು ಹೋದನೇ? ಭರತ, ಶತ್ರಘ್ನರೂ ಹೆಂಡತಿಯನ್ನು ಬಿಟ್ಟೇ ಉಳಿದರೇ?

 

 ಅಪಹರಿಸಿದನವಳ ಆ ಅಸುರ..

 

ಸುಂದರವಾಗಿದ್ದದ್ದು ಅವಳ ತಪ್ಪೇ? ಆ ರಾವಣ ಅವಳನ್ನು ನೋಡಿದ್ದು ಅವಳ ತಪ್ಪೇ? ಅವನು ಅಪ್ರತಿಮ ಸುಂದರಿ ಸೀತೆಯನ್ನು ಬಯಸಿದ್ದು ಅವಳ ತಪ್ಪೇ? ಬಲಿಷ್ಠ, ಕ್ರೂರಿ ಅವಳನ್ನು ಅಪಹರಿಸಿದರೆ ಅವಳೇನು ಮಾಡಲು ಸಾಧ್ಯವಿತ್ತು??

 

ಅಷ್ಟು ದಿನ ಅಸುರ  ರಾವಣನ ಬಂಧನದಲ್ಲಿದ್ದ ಸೀತೆಯ ಪಾವಿತ್ರ್ಯವನ್ನೇ ಸಂಶಯಿಸಿದ ರಾಮ!

‘ನಾನು ಸೂರ್ಯವಂಶದ ಮಾನವನ್ನು ಕಾಪಾಡಿದೆ. ನಿನ್ನನ್ನು ಕುಲದ ಮರ್ಯಾದಿಗಾಗಿ ಬಿಡಿಸಿದೆ. ನನ್ನ ಪರಾಕ್ರಮದಿಂದ ರಾವಣನನ್ನು ಕೊಂದೆ. ಭೂಮಂಡಲದಲ್ಲಿ ನಾನು ಮಾಡಬೇಕಾದ ಕರ್ತವ್ಯವನ್ನು ನೆರವೇರಿಸಿದೆ. ಇನ್ನು ನೀನು ನಿನ್ನ ಇಷ್ಟ ಬಂದಲ್ಲಿ ಹೋಗು’ ಎಂದನಂತೆ ರಾಮ!

 

 ಓಹೋ! ನನ್ನ ಬಿಡಿಸಿದ್ದು ಕುಟುಂಬ ಮರ್ಯಾದೆಗೆ! ಕರ್ತವ್ಯಕ್ಕೆ!! ವಿಶ್ವಾಸ, ನಂಬಿಗೆ, ಪತ್ನಿ ಎಂಬ ಪ್ರೀತಿಗಾಗಿ ಅಲ್ಲ! ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದ ಧಾರ್ಮಿಕ ಪ್ರಜ್ಞೆಗಾಗಿ ಅಲ್ಲ ಎಂದು ತಿಳಿದಾಗ ಅವಳಿಗಾದ ಸಂಕಟವೆಷ್ಟೋ??

 

ತನ್ನ ಪಾವಿತ್ರ್ಯ ಪರೀಕ್ಷೆಗೆ ಅಗ್ನಿಯನ್ನೇ ಪ್ರವೇಶಿಸಿದಳವಳು.. ಸತ್ತ ಮಾವ ದಶರಥನೇ ಪ್ರತ್ಯಕ್ಷವಾಗಿ ಸೀತೆ ಪವಿತ್ರಳು ಎಂದನಂತೆ! ಮೂವತ್ತುಮೂರು ಕೋಟಿ ದೇವಾನುದೇವತೆಗಳು ಸೀತೆಯ ಪಾವಿತ್ರ್ಯವನ್ನು ಕೊಂಡಾಡಿದರಂತೆ!!

 

ಅಗ್ನಿ ಸುಡದಿದ್ದರು… ಅವಳ ಆತ್ಮಗೌರವ ಅವಳನ್ನ ಸುಡದಿರಬಹುದೇ?? ಅವಳ ಹೃದಯಕ್ಕೆ ಆರದಗಾಯ ಆಗದಿದ್ದೀತೇ? ಏನೂ ಪ್ರಶ್ನೆ ಮಾಡದವಳು.  ಅಂದಿನಿಂದ ಅವಳು ಮಹಾಪತಿವ್ರತೆ..!!

 

ಗರ್ಭಿಣಿ ಪತ್ನಿಯನು ದೂರ ಅಟ್ಟಿದ ರಾಮ.

 

ನನ್ನನ್ನು ರಾವಣನ ಸೆರೆಯಿಂದ ಬಿಡಿಸಿ ಕರೆತಂದ ‘ನನ್ನ ರಾಮ’ ಎಂದು, ಸುಖ – ಸಂತೋಷ – ಆರೋಗ್ಯ -  ಆನಂದವಾಗಿಡಲು ಎಷ್ಟು ಪ್ರಯತ್ನಿಸಿರಬಹುದು?... ಹೆಣಗಾಡಿರಬಹುದು?... ಅಣ್ಣನ ಆಜ್ಞೆಯಂತೆ ಲಕ್ಷ್ಮಣನು ಗುರುಗಳ ಆಶ್ರಮದ ಸನಿಹ ಕರೆತಂದು ‘ಇಲ್ಲೇ ಇರು’ ಎಂದು ಬಿಟ್ಟು ಹೋದನಲ್ಲ..!!

 

ತುಂಬಾ ದಿನಗಳ ನಂತರವಷ್ಟೇ ಸೀತೆಗೆ ತಿಳಿಯಿತು… ರಾಮ ಅವಳನ್ನು ತ್ಯಜಿಸಿದ್ದಾನೆಂದು….. ‘ರಾವಣ ಅಪಹರಿಸಿದ ನನ್ನನ್ನು ಪವಿತ್ರಳು ಎಂದು ಅಯೋಧ್ಯಾ  ರಾಮನ ಪ್ರಜೆಗಳು ಒಪ್ಪಲಿಲ್ಲವಂತೆ! ಬಿಳಿವಸ್ತ್ರದ ಮೇಲೆ ಆದ ಕಪ್ಪಕಲೆಯೆಂದು ಹೇಳಿದರಂತೆ! ಅದೇ ನನ್ನನ್ನು ಬಿಡಲು ಕಾರಣವಂತೆ!..

 

ಕಾರಣ ತಿಳಿದು ಅವಳ ಹೃದಯ ಒಡೆದೇ  ಹೋಗಿರಬಹುದೇ?? ರಾಮ ಅವಳಿಗೆ ಕೊಟ್ಟ ಮಾತುಗಳು, ಅವಳ ಒಪ್ಪಿಗೆ, ಅವಳನ್ನು ಲಂಕೆಯಲ್ಲಿ ಒಳಪಡಿಸಿದ ಅಗ್ನಿಪರೀಕ್ಷೆಗೆ ಬೆಲೆಯೇ ಇರಲಿಲ್ಲವೇ?? ಅಗ್ನಿಯಲ್ಲಿ ಹಾರಿ ಪವಿತ್ರಳೆಂದು ಮೂರು ಲೋಕವು ಒಪ್ಪಿದ ಮೇಲೆ ಇದೆಂಥ ವರ್ತನೆ ಎಂದು ಸೀತೆ ಕೇಳಿದ್ದರೆ!…. ಅವಳಿಗೆ ನಾವೆಲ್ಲ ಮಹಾ ಪತಿವ್ರತೆ ಅಂತ ಪಟ್ಟ ಕೊಡುತ್ತರಿಲಿಲ್ಲವೇನೋ…?!

 

ತಾಯ್ತನವು ಸುಖವಂತೆ..

 

ಪತಿ ತ್ಯಜಿಸಿದ ಹೆಣ್ಣು ಅವಳು.  ರಾಮನ ಕುಡಿ ಅವಳ ಗರ್ಭದಲ್ಲಿ!!  ತಾಯಿಯಾಗುವ ಸಂಭ್ರಮವನ್ನು ಸಂಭ್ರಮಿಸಲಿಲ್ಲ ಅವಳು. ಹೆರಿಗೆಯ ಸಮಯದಲ್ಲಿ ಕಾಳಜಿ ತೋರಲು ತನ್ನವರಾರು ಇಲ್ಲ ಎಂದು ಎಷ್ಟು ನೊಂದಳೋ? ಬೆಂದಳೋ? ಆ ಮಹಾಸಾಧ್ವಿ??  ಹೆರಿಗೆಯ ನೋವಿನ ಉಸಿರಿನಲ್ಲಿ ಮನದ ನೋವಿನ ನಿಟ್ಟುಸಿರೆಷ್ಟೊ, ಗಂಗಾ ನದಿಯಲ್ಲಿ ಬೆರೆತು ಹರಿದು ಹೋದ ಕಣ್ಣೀರೆಷ್ಟೋ? ಹುಟ್ಟಿಸಿದ ಭೂಮಿತಾಯ ಮೇಲೆ ಇಂಗಿ ಹೋದ ಮನದ ನೋವಿನ ಕಣ್ಣೀರೆಷ್ಟೋ?

 

ಸೂರ್ಯವಂಶದ ಕುಡಿಯನ್ನು ಹೆರುವಾಗಲೂ, ದುಃಖದ ಕಣ್ಣೀರು ಆನಂದ ಭಾಷ್ಪ ಆಗಲೇ ಇಲ್ಲ!! ತವರಿನ ಸೀಮಂತವಿಲ್ಲ! ಸೇರಿದ ಮನೆಯ ಆನಂದೋತ್ಸವವಿಲ್ಲ! ಅಂತೂ ಎರಡು ಮಕ್ಕಳ ತಾಯಿ ಸೀತೆ… ಪರಿತ್ಯಕ್ತೆ !!

 

ಆಶ್ರಮಕ್ಕೆ ಶತ್ರುಘ್ನ

 

ಸೂರ್ಯವಂಶದಿಂದ ಪರಿತ್ಯಕ್ತಳು! ರಾಮನ ಹೃದಯದಿಂದ ಪರಿತ್ಯಕ್ತಳು!! ಅತ್ತೆಯರಿಂದ, ಅಯೋಧ್ಯೆಯ ಪ್ರಜೆಗಳಿಂದ, ಕುಲದಗುರು ವಶಿಷ್ಠರಿಂದ ಪರಿತ್ಯಕ್ತಳು ಎಂಬ ಭಾವನೆಯಲ್ಲೇ ಬೆಂದು ಹೋದಳೇ! ಅದರಲ್ಲಿಯೂ ಅಪವಿತ್ರಳು ಎಂಬ ಅಪವಾದ! ಸೀತೆ ಜೀವಂತ ಶವವಾಗಿದ್ದಳೇ? ನಡೆದಾಡುವ ಹೆಣವಾಗಿದ್ದಳೇ?

 

ಸಭೆಯಲ್ಲಿ ರಾಮನೊಬ್ಬನೇ ಸಿಂಹಾಸನದಲ್ಲಿ ಆಸೀನನಾಗಿದ್ದಾಗಲೂ, ಸೀತೆ ಎಲ್ಲಿ ಎಂದು ಯಾರೂ ಪ್ರಶ್ನಿಸಲಿಲ್ಲವಂತೆ!! ತನ್ನವರು, ತನ್ನ ಹಿರಿಯರು ಯಾರೂ ಸಪ್ತಪದಿಯನ್ನು ತುಳಿದ ಬಂದ ಸೊಸೆಯನ್ನು ನಂಬಲೇ ಇಲ್ಲವಲ್ಲ ಎಂದು ಎಷ್ಟು ಕೊರಗಿರಬಹುದು? ಸೂರ್ಯವಂಶದ ಹಿರಿಯರೆಲ್ಲ ‘ಸೀತೆಯನ್ನು ತಿರಸ್ಕರಿಸಿರುವುದು ಸರಿಯೇ’ ಎಂದು ಕುಲಗುರು ವಶಿಷ್ಠರೂ ಪ್ರಶ್ನಿಸಲಿಲ್ಲವಂತೆ!! ಸೂರ್ಯವಂಶದ ಕುಡಿಗಳನ್ನು ಹೆರಲು ವಾಲ್ಮೀಕಿಗಳ ಆಶ್ರಮವೇ ತವರಾಯ್ತೇ? 

 

ಮಕ್ಕಳ ಮುದ್ದು ಮುಖವನ್ನು ನೋಡುತ್ತಾ ಬದುಕಿನ ಬವಣೆಯನ್ನು ಮರೆಯ ಬೇಕೆಂದಿರುವಾಗ… ಲವ, ಕುಶರ ಜೊತೆ ಅವಳು ದುಃಖ ಮರೆಯುವ ಪ್ರಯತ್ನ ಪಡುತ್ತಿರುವಾಗಲೇ.. ಮಧು ಎಂಬ ರಾಕ್ಷಸನನ್ನು ಕೊಂದ ಮೈದುನ ಶತ್ರುಘ್ನ ವಾಲ್ಮೀಕಿಗಳ ಆಶ್ರಮಕ್ಕೆ ಬರಬೇಕೆ? ರಾಕ್ಷಸನನ್ನು ಕೊಂದ ಬಿಮ್ಮೋ? ಇಲ್ಲಾ ಎಲ್ಲರಿಂದ ಪರಿತ್ಯಕ್ತಳಾದ ಸೀತೆಯ ದುರಂತ ಸ್ಥಿತಿಯನ್ನು ನೋಡಿ ನಗಲು ಬಂದನೋ? ಎಂದು ನಿರ್ಣಯಿಸಲಾಗಲೇ ಇಲ್ಲ. ಬಿಟ್ಟು ಹೋದವರನ್ನು ಅವಮಾನ ಪಡಿಸುವುದೆಂದರೆ ಇದೇ ಏನೋ? ತಮ್ಮ ದೊಡ್ಡಸ್ಥಿಕೆಯನ್ನು ತೋರಿಸಲು ಒಂದಲ್ಲ ಒಂದು ನೆಪವನ್ನು ಹೊತ್ತು ಬರುವುದು…!

 

‘ಅತ್ತಿಗೆ ತಾಯಿಸಮಾನ’ ಎಂದು ಸಹಾಯಕ್ಕೆ ಬಂದವನಲ್ಲ! ಅಣ್ಣನನ್ನು ಒಪ್ಪಿಸಿ ಸೀತಾಮಾತೆಯನ್ನು ಕರೆದೊಯ್ಯಲು ಬಂದವನಲ್ಲ! ತಾಯಿಗೆ ಸಮಾನಳಾದ ಅತ್ತಿಗೆ ಇರುವಳಲ್ಲ ಎಂದು ಮಾತನಾಡಿಸಲು ಬಂದವನಲ್ಲ! ಗೌರವದಿಂದ ನಮಸ್ಕರಿಸಲು ಬಂದವನಲ್ಲ! ಆರೋಗ್ಯದಿಂದ ಇರುವೆಯಾ ಎಂದು ಕೇಳಲೂ ಬಂದವನಲ್ಲ! ಕೇಳಲೂ ಇಲ್ಲ!

 

ಬಂದವನಿಗೆ ವಾಲ್ಮೀಕಿ ಋಷಿಗಳು ನನ್ನ ಮಕ್ಕಳಾದ ಲವ-ಕುಶರಿಂದ ‘ರಾಮಚರಿತ’ವನ್ನು ಕೇಳಿಸಿದರು!! ಅರ್ಧ ಬರೆದಿಟ್ಟ ರಾಮಚರಿತವದು! ಸಂಪನ್ನ ಎಂದು ಮುಕ್ತಾಯ ಹಾಡದ ರಾಮಚರಿತವದು!!

 

ಅಶ್ವಮೇಧ ಯಾಗ

 

ಮರುದಿನ ಹೋಗುವಾಗ… ‘ರಾಮ ಅಶ್ವಮೇಧಯಾಗವನ್ನು ಮಾಡುವನು. ತಾವು ತಮ್ಮ ಶಿಷ್ಯರೊಂದಿಗೆ ಬರಬೇಕು. ರಾಮನ ಮುಂದೆ ಅವನ ಚರಿತೆಯನ್ನು ನಿಮ್ಮ ಶಿಷ್ಯರು ಹಾಡಬೇಕೆಂದು ಆಮಂತ್ರಣ ನೀಡಿದ’. ಅಲ್ಲೇ ತಿರುಗಾಡುತ್ತಿರುವ ಸೂರ್ಯವಂಶದ ಮಹಾರಾಣಿಗೆ ಆಮಂತ್ರಣವಿಲ್ಲ!

 

ವಾಲ್ಮೀಕಿಗಳು ಸೀತೆಗೆ ಆಶ್ರಯವನ್ನಿತ್ತರು! ಅವಳು ಮಕ್ಕಳನ್ನು ಹೆತ್ತುದು ಆಶ್ರಮದಲ್ಲಿ! ಆಶ್ರಮವೇ ಅವಳಿಗೆ ತವರ ಮನೆ! ಆಶ್ರಮದಲ್ಲಿ ಸೂರ್ಯವಂಶದ ಮಕ್ಕಳ ಜನನ! ವಾಲ್ಮೀಕಿಗಳ ಮಾತು ವೇದವಾಕ್ಯ.

 

ಆಮಂತ್ರಣವೇ ಇಲ್ಲ! ಆದರೂ ಅವಳಿಗೆ ವಾಲ್ಮೀಕಿ ಗುರುಗಳ ಒತ್ತಾಯ ತುಂಬಿದ ಆದೇಶದಂತೆ, ರಾಮ ಮಾಡುತ್ತಿರುವ ಅಶ್ವಮೇಧಯಾಗಕ್ಕೆ ಹೋಗಬೇಕಾಯಿತು…!! ಮುನಿಗಳೇ ಒತ್ತಾಯಿಸಿ ಒಯ್ಯುತ್ತಿರುವಾಗ, ತಮ್ಮಿಬ್ಬರನ್ನೂ ಒಟ್ಟುಗೂಡಿಸುವರು ಎಂಬ ಒಳ ಆಸೆಯೊಂದು ಇತ್ತೋ ಏನೋ? ನಗು-ನಗುವ ಸಂಸಾರದ ಬಂಗಾರದ ಕನಸ ಕಂಡಿದ್ದಳೇನೋ?

 

ಯಾಗಕ್ಕೆ ಹೋದ ಅವಳಿಗೆ ತನ್ನ ಜಾಗದಲ್ಲಿ ತನ್ನದೇ ಬಂಗಾರದ ಪುತ್ಥಳಿಯ ನೋಡಿ.. ಏನು ಅನಿಸಿರಲಿಕ್ಕಿಲ್ಲ?! ಪತ್ನಿ ಇಲ್ಲದವ ಯಾಗ ಮಾಡಬಾರದು. ಯಾಗ ಮಾಡಲು ಪತ್ನಿ ಬೇಕು!! ಆದರೆ ಪತ್ನಿಯೇ ಇಲ್ಲದೇ ಯಾಗ!? ಧರ್ಮವಂತೂ ಅಲ್ಲವೇ ಅಲ್ಲ! ಇದು ಯಾವ ರೀತಿಯ ಆಪದ್ಧರ್ಮ? ಅವಳಿಗೆ ಆ ಸನ್ನಿವೇಶವನ್ನು ಕಂಡು ಜಿಗುಪ್ಸೆ ಮೂಡಿರಬೇಕು.

 

‘ನೀನೊಂದು ಗೊಂಬೆ ಅಷ್ಟೇ’! ಎಂದು ಯಾಗ ಮಾಡುತ್ತಿದ್ದ ರಾಮನೇ ಕಿವಿಯಲ್ಲಿ ಬಂದು ಕೂಗಿದಂತಾಯಿತೇ!? 

 

ವಸಿಷ್ಠರು ಬೇರೆ ಮದುವೆ ಆಗೆಂದರೂ… ಬೇರೆ ಮದುವೆ ಆಗುವುದಿಲ್ಲ! ಆದರೆ ಅಶ್ವಮೇಧ ಮಾಡಬೇಕು ಎಂದನಂತೆ ರಾಮ. ಏಕಪತ್ನಿ ವ್ರತಸ್ಥ ಎಂಬ ಬಿರುದು ಹೋಗಬಾರದು. ಆದರೆ ಪರಿತ್ಯಕ್ತ ಸೀತೆಗೆ ಸ್ಥಾನವಿಲ್ಲ! ಮಾನವೂ ಇಲ್ಲ! ಸಂಶಯಪಟ್ಟವರಿಗೆಲ್ಲ ಚಿನ್ನದ ಸೀತಾಕೃತಿ ಮಾನ್ಯವೇ ಆಯಿತು! ಇದೆಂಥ ಧರ್ಮಾಚರಣೆ! ಪತಿವ್ರತೆಯ ಮನವು ಪ್ರಶ್ನೆಯಿಂದ ಜರ್ಝರಿತವಾಗದೇ ಉಳಿದೀತೇ?!

 

ವಾಲ್ಮೀಕಿ ಮುನಿಗಳು ‘ಶ್ರೀರಾಮ ಸೀತೆ ಪರಿಶುದ್ಧಳು! ಪತಿವ್ರತೆ!! ಸ್ವೀಕರಿಸು’ ಎಂದಾಗ… ಅವಳಿಗೆ ಯಾಗದಲ್ಲಿ ಇರಲೇ ಬೇಕಾದ ಪತ್ನಿಯ ಸ್ಥಾನ ಮತ್ತೆ ರಾಮ ಕೊಟ್ಟರೆ ಎಂಬ ಆಸೆ ಸೀತೆಗೆ ಜನಿಸಿತ್ತೇ??  ಜೀವನದಲ್ಲಿ ಮತ್ತೆ ಗಂಡ - ಮಕ್ಕಳ ಜೊತೆ ಬಾಳುವ ಕನಸು ಅರಳಿತ್ತೇ?? 

 

ವಾಲ್ಮೀಕಿ ಮಹಾಮುನಿಗಳು ‘ರಾಮ! ಸೀತೆ ಪರಿಶುದ್ಧಳು. ಲವ-ಕುಶರು ನಿನ್ನ ಮಕ್ಕಳು. ಸ್ವೀಕರಿಸು’ ಎಂದಾಗ ರಾಮ ಒಪ್ಪಲಿಲ್ಲ! ಮುನಿಗಳ ಮಾತಿಗೂ ಮಾನ್ಯತೆ ಕೊಡಲಿಲ್ಲ!

 

ರಾಮನೆಂದ ‘ಸೀತೆ ಪವಿತ್ರಳು’ ಎಂದು ಸೇರಿದ ಗಣ್ಯರ ಮುಂದೆ ತೋರಿಸಲಿ… ಎಂದಾಗ ಅವಳ ಮನಸ್ಸು ಛಿದ್ರ-ಛಿದ್ರವಾಗದೇ ಉಳಿದಿತ್ತೇ? ಇಲ್ಲಿಗೇ ಇದಕ್ಕೆ ಪೂರ್ಣವಿರಾಮ ಬೀಳುವುದಿಲ್ಲ! ತವರ ಮನೆಯಲ್ಲಿ, ಮೈದುನರ ಮಾವನ ಮನೆಗಳಲ್ಲಿ, ಎಲ್ಲೇ ಅಪಸ್ವರ ಜನಿಸಿತು ಎಂದಾದರೆ… ಪುನಃ ನನ್ನನ್ನು ಪತಿವ್ರತಾ ಪರೀಕ್ಷೆಗೆ ಒಳಪಡಿಸದೇ ಬಿಟ್ಟಾನೆಯೇ ರಾಮ? ಅಗ್ನಿಸಾಕ್ಷಿಯಾಗಿ ಸಪ್ತಪದಿಯನ್ನು ತುಳಿದ ರಾಮನೇ ಅಗ್ನಿಗೇ ದೂಡಿರಲಿಲ್ಲವೇ? ಸಾಕು…. ಸಾಕು…. ಈ ಬವಣೆ ಎಂದೆನಿಸದೇ ಇದ್ದೀತೆ ಪವಿತ್ರ ಸೀತೆಗೆ?

 

ಮರಳಿ  ತಾಯಿಗರ್ಭಕ್ಕೆ!!  

 

'ಜೀವನದಲ್ಲಿ ಮತ್ತೆ ಕಂಡ ಗಂಡ ರಾಮ' ಎನ್ನುವ ಕಲ್ಪನೆ ಕಳಚಿ ಬಿದ್ದ ನಂತರವಷ್ಟೇ ತಿಳಿಯಿತೇನೋ ಅವಳಿಗೆ ತನಗಿರುವುದು ಪತಿ ರಾಮನಲ್ಲ.. ಇರುವುದು ರಾಜಾರಾಮ… ಕರ್ತವ್ಯಬದ್ಧ ರಾಮ…  ಧರ್ಮನಿಷ್ಠ ರಾಮ… ಸತ್ಯಸಂಧ ರಾಮ… ಪಿತೃವಾಕ್ಯ ಪರಿಪಾಲಕ ರಾಮ… ಪ್ರಜೆಗಳ ಪ್ರೀತಿಯ ರಾಮ…. 

       

ಆಗಲೇ ಸೀತೆಗೆ ಯಾರಿಗೂ ಕಾಣದ, ಎಂದಿಗೂ ಬಾರದ ಭೂಮಿಯೊಳಗೆ ಸೇರಿ ಹೋಗುವ ಮನಸ್ಸಾಯಿತೇನೋ... ಆಗ ಸೀತೆಗೆ ಏನು ಅನಿಸಿರಬಹುದೋ ಗೊತ್ತಿಲ್ಲ...! ಪದೇ – ಪದೇ ಪರೀಕ್ಷೆಗೆ ಒಳಪಡುವುದಕ್ಕಿಂತಲೂ ಸೀತೆ ಪವಿತ್ರಳು ಎಂದು ಮೂರುಕಾಲದಲ್ಲಿಯೂ ಸ್ಥಿರವಾಗಿರುವಂತೆ ಮಾಡಬೇಕೆಂದು ಮಕ್ಕಳನ್ನೂ ತ್ಯಾಗ ಮಾಡಲು ಸಿದ್ಧಳಾದಳು! ಗಟ್ಟಿ ಬೀಜವಾದಳು! ಯಾರಿಂದಲೂ ತಾಯಿಯ ಗರ್ಭದಿಂದ ಬಂದ ಮೇಲೆ ಪುನಃ ತಾಯಿಯ ಗರ್ಭವನ್ನು ಸೇರಲಾಗುವುದಿಲ್ಲ! ಸೀತಾಮಾತೆ ಭೂತಾಯ ಗರ್ಭವನ್ನು ಸೇರಿದಳು!! ರಾಮನ ಬದುಕಿನಲ್ಲಿ ದೀರ್ಘ ಪ್ರಶ್ನೆಯಾದಳು! ರಾಮನಿಗೆ ಬಿಡಿಸಲಾರದ ಪ್ರಶ್ನೆಯಾದಳು! ಉತ್ತರವೇ ಇಲ್ಲದ ಪ್ರಶ್ನೆಯಾದಳು! ರಾಮನ ವರ್ತನೆಯನ್ನೇ ಸದಾ ಪ್ರಶ್ನಿಸುವ ಪರಿಪೂರ್ಣ ಪ್ರಶ್ನೆಯಾದಳು!!.....  ಪ್ರಜೆಗಳಿಗೆ, ಅತ್ತೆಯಂದಿರಿಗೆ, ಕುಲಗುರುಗಳಿಗೆ, ಸಂಶಯಿಸಿದ ಎಲ್ಲರಿಗೂ ಬೆಂಬಿಡದ ಪ್ರಶ್ನೆಯಾದಳು!!

 

ಸೀತೆಯ ಹೆಸರಿಡಬಾರದೇ?

       

ಆದರೆ ಸೀತೆಯ ಹೆಸರೇ ಬೇಡ ಅನ್ನುವಷ್ಟು ಅವಳ ಬದುಕು ಕಷ್ಟ ಹಾಗೂ ಗೊಂದಲಗಳ ಗೂಡಾಗಿತ್ತೇ? ಪತಿಗೆ ಏನಾದರೂ ತೊಂದರೆ ಕೊಟ್ಟಳೇ? ಅಯೋಧ್ಯೆ ಅವಳ ಕಾಲ್ಗುಣದಿಂದಲೇ ಗೊಂದಲದ ಗೂಡಾಗಿತ್ತೇ? ಅದೂ ಗೊತ್ತಿಲ್ಲ... ಅವಳ ಹೆಸರನ್ನು ಇಟ್ಟರೆ ಅವಳ ಎಲ್ಲಾ ಕಷ್ಟ, ದುಃಖಗಳ ತಾಪ ನಮ್ಮನ್ನೂ ತಟ್ಟಿ ಬಿಡಬಹುದೇ?? 

 

ಸೀತಾಳ ಬದಲು ದೀಯಾ ಎಂದು ಹೆಸರಿಟ್ಟರಲ್ಲ! ಆ ಹೆಸರಿನಲ್ಲಿ ಏನೂ ದೋಷವೇ ಇಲ್ಲವೇ? ದೀಯಾ ಎಂದರೆ ಬೆಳಕು, ಕೊಡುವುದು ಎಂದು ಅರ್ಥವಿದೆ. ‘ನಮ್ಮಲ್ಲಿರುವುದನ್ನೆಲ್ಲಾ ಕೊಡುವುದು’ ಎಂದರ್ಥವಲ್ಲವೇ? ಎಲ್ಲವನ್ನೂ ಕೊಟ್ಟ ಮೇಲೆ ಉಳಿಯುವುದು ಏನು? ಕಷ್ಟವೇ ಅಲ್ಲವೇ? ಬೆಳಕು ಕತ್ತಲೆಯನ್ನು ಹೋಗಲಾಡಿಸುವುದು. ಕತ್ತಲೆ ತುಂಬಿದ ಬದುಕಿಗೆ ಬೆಳಕು ಆರಿ ಹೋದರೆ? ಪ್ರತಿ ಹೆಸರಿಗೂ ಒಂದು ಒಳ್ಳೆಯ ಅರ್ಥ, ಇನ್ನೊಂದು ಅಪಾರ್ಥವನ್ನು ಕಲ್ಪಿಸಬಹುದು ಅಲ್ಲವೇ?

 

ಕೆಲವು ಪ್ರಶ್ನೆಗಳಿಗೆ ಮನಸ್ಸಿಗೊಪ್ಪುವ ಉತ್ತರ ಸಿಗುವುದು ತುಂಬಾ ಕಷ್ಟ..

ಅಂತ ಪ್ರಶ್ನೆಗಳನ್ನ ಯಾವುದೋ ಉತ್ತರಗಳಿಂದ ಸಮಾಧಾನ ಪಡಿಸಿಕೊಳ್ಳಬೇಕು.. ಪಟ್ಟುಕೊಳ್ಳಬೇಕು.

ಅಮೃತ ಹೆಚ್ಚಾದರೆ ವಿಷವಂತೆ! ಅಮೃತಕ್ಕೆ ವಿಷ ಬೆರೆಸಿದರೆ ಅಮೃತವೇನು ವಿಷವಾಗುವುದೇ?! ಮತ್ತೆ ಅದನ್ನು ಅಮೃತವೆಂದು ಕರೆಯುವುದೇಕೆ? ತಿನ್ನುವ ಅನ್ನವೂ ಅಮೃತವಾಗಲಿ ಎಂದು ಆಶಿಸುವವನಿಗೆ ಆಹಾರ ದೋಷವೆನ್ನುವುದೇಕೆ? ಸದಾ ಅಮೃತವೇ ಬೇಕೆಂದರೆ ಸಿಗುವುದೇ? ಹಾಗೆಯೇ ಈ ಪ್ರಶ್ನೆಗಳು…

ಪ್ರಶ್ನೆಗಳನ್ನು ಪ್ರೆಶ್ನೆಗಳಾಗಿಯೇ ಇರಲು ಬಿಡಬೇಕು ಅಂದು ಕೊಳ್ಳುತ್ತಾ ರಾತ್ರಿ ಊಟದ ತಯಾರಿ ಮಾಡಲು ಅಡುಗೆ ಮನೆಗೆ ಹೊರಟೆ… ಹೆಸರಿಡಲು ಇಷ್ಟೊಂದು ದೊಡ್ಡ ಪುರಾಣ ಬೇಕಿತ್ತೇ? ನಗುತ್ತಿತ್ತು ನನ್ನ ಮನಸ್ಸು….

 

 

ನನ್ನ ಪರಿಚಯ

 

ಅಂದ ಹಾಗೆ ನಾನು ನಿಮಗೆ ನನ್ನ ಪರಿಚಯ ಹೇಳಲೇ ಇಲ್ಲ! ನಾನು "ಜಾನಕಿ" ಅಂತ…. 

ನಿಲ್ಲಿ ನಿಲ್ಲಿ… ಹಾಗೆಲ್ಲ ಯೋಚಿಸ ಬೇಡಿ. ನನ್ನ ಜೀವನದಲ್ಲಿ ಸೀತೆಯ ಬಾಳಿನ ಕಷ್ಟಗಳು, ಪ್ರಶ್ನೆಗಳು, ಯಾವುದೂ ಇಲ್ಲ.

 

ತುಂಬಾ ಪ್ರೀತಿಸುವ ಒಳ್ಳೆಯ ಪತಿ, ಖುಷಿಯಾದ ಸಂತೃಪ್ತ ಜೀವನ ನನ್ನದು. ಸೀತೆಯಂತೆ ಅವಳಿ - ಜವಳಿ ಗಂಡು ಮಕ್ಕಳಿದ್ದಾರೆ… ಅವರಿಗೆ ಮದುವೆ ಮಾಡಲು ವಧು ಬೇಕು. ಹೆಸರು ಏನೇ ಇದ್ದರೂ ತೊಂದರೆ ಇಲ್ಲ. ಸೀತಾ, ಸಿಯಾ, ಮೈಥಿಲಿ, ವೈದೇಹಿ, ಭೂಮೀಜಾ.....

 

ಕವಿತಾ ಗಿರೀಶ.

ಶಾರ್ಜಾ. ಯು. ಏ. ಇ.

 

email: kvthegde@gmail.com

c\o

Anant Vaidya

Post: Balagimane

Yellapur-581359-Uttara Kannda

email: anantvaidyayellapur@gmail.com

 

Tuesday, July 14, 2020

'ವಿಜಯವಾಣಿ' ದಿನಪತ್ರಿಕೆಯನ್ನು ಓದಿ. ಜ್ಞಾನವನ್ನು ಹೆಚ್ಚಿಸಿಕೊಳ್ಳಿ.
ಕೃತಜ್ಞತೆಗಳು: ವಿ. ಆರ್. ಎಲ್ ಮೀಡಿಯ, ಸಂಪಾದಕರು, ವ್ಯವಸ್ಥಾಪಕ ಸಂಪಾದಕರು, ಸಹ ಸಂಪಾದಕರು ಹಾಗೂ ತಂತ್ರಜ್ಞರಿಗೆ.
************************
ನಮನ: ಓದುಗ ದೇವರಿಗೆ
******************************
************************
ಶಿಲ್ಪಿ ಮಹಾನ್ ತಪಸ್ವಿ!
******************************
ಒಂದು ಬಿಡಿಸಲಾರದ ಕಗ್ಗಂಟಿದೆ. ಅದುವೇ ಶಿಲ್ಪವನ್ನು ಕೆತ್ತಿ ಮೂರ್ತಿ ಮಾಡುವ ಶಿಲ್ಪಗಾರನಿಗೆ ಏಕೆ ಮಾನ್ಯತೆ ಸಿಗುವುದಿಲ್ಲ!? ದೇವಸ್ಥಾನಗಳಲ್ಲಿ ಹಣ ಕೊಟ್ಟವರನ್ನು ಫಲಕದಲ್ಲಿ ಕೆತ್ತುವರು, ಯಜಮಾನನ ಹೆಸರನ್ನು ಕೆತ್ತುವರು! ಪುರೋಹಿತರ ಹೆಸರನ್ನು, ಆಗಮಶಾಸ್ತ್ರಜ್ಞನ ಹೆಸರನ್ನು, ಸರಕಾರದಿಂದ ನಮ್ಮ ಹಣವನ್ನೇ ದೇವಾಲಯಗಳಿಗೆ ಕೊಡಿಸುವ ಮಂತ್ರಿಗಳ ಹೆಸರನ್ನು ಕೆತ್ತಿಸುವರು, ಆದರೆ ಎಲ್ಲೆಡೆಯೂ ಶಿಲ್ಪಿಗಳ ಹೆಸರನ್ನು ಮಾತ್ರ ಉಲ್ಲೇಖಿಸುವುದಿಲ್ಲ!!
ಗಣಪತಿ ಹಬ್ಬದ ಮಣ್ಣಿನ ಮೂರ್ತಿಯಿಂದ ಹಿಡಿದು ದೇವಾಲಯದಲ್ಲಿ ಕೂರಿಸುವ ಏಳು ಇಂಚಿನ ಮೂರ್ತಿಯವರೆಗೂ ಶಿಲ್ಪಿ ತಂದು ಕೊಡುವನು. ಮುಂದಿನ ಯಾವ ಕಾರ್ಯಗಳಿಗೂ ಆತನ ಪ್ರವೇಶವೇ ಇಲ್ಲ! ಶಿಲ್ಪಿಗೆ ಶಾಲು ಹೊದಿಸಿ ಹಣವನ್ನು ನೀಡಿ ಸಾಗು ಹಾಕುವರು. ವಿಶ್ವಕರ್ಮ ಜನಾಂಗದವರೂ ಬ್ರಾಹ್ಮಣರೇ ಎನ್ನುವುದನ್ನು ಶ್ರೀ ಮತ್ತೂರು ಕೃಷ್ಣ ಮೂರ್ತಿಯವರು ಹೇಳಿರುವರು. ಹಾಗಿದ್ದರೂ ಏಕೆ ಈ ತಾರತಮ್ಯ?
ದೇವಾಲಯಗಳ ನಿರ್ಮಾಣದ ಒಂದು ಶಾಸ್ತ್ರವಾದ ತಂತ್ರ ಸಮುಚ್ಚಯದಲ್ಲಿ ಶಿಲ್ಪಿಗಳಿಗೆ ಮಾನ್ಯತೆಯೇ ಇಲ್ಲ. ಪುರೋಹಿತನು ಶಿಲ್ಪಿಯನ್ನು ಆರಿಸುವನು ಎಂದಷ್ಟೇ ಇದೆ! ಶಿಲ್ಪವನ್ನು ಆರಿಸುವವನು, ಸ್ಥಳವನ್ನು ಆರಿಸುವವನು, ಸ್ಥಳಶುದ್ಧಿಯನ್ನು ಮಾಡುವವನು, ಪ್ರಾಣಪ್ರತಿಷ್ಠೆಯನ್ನು ಮಾಡುವವನು ಆಚಾರ್ಯನೇ!! ಶಿಲ್ಪದ ಗುಣ – ಧರ್ಮವನ್ನು ತಿಳಿದು ಆರಿಸುವ ಶಿಲ್ಪಿಗೆ ಶಿಲ್ಪವನ್ನೇ ತಿಳಿಯದ ಪುರೋಹಿತನು ಪೂಜಿಸಿ ಕೊಡುವುದೆಂದರೆ ಆಶ್ಚರ್ಯವಾಗುವುದು. ಸ್ಥಪತಿ ಕಷ್ಟ ಪಡುವವನಾದರೂ ಯಜಮಾನ, ಆಚಾರ್ಯ ಪೂರ್ಣವಾದ ಹೊಣೆಯನ್ನು ಹೊರುವರು!
ಶಿಲ್ಪಿಗೆ ಅನೇಕವಾದ ಕಟ್ಟು-ನಿಟ್ಟುಗಳು ಇರುತ್ತವೆ. ದೂರದೃಷ್ಟಿ ಅವನ ಉಸಿರಾಗಿರುತ್ತದೆ. ಶಿಲ್ಪದಿಂದ ಹೊರಡುವ ನಾದದಿಂದಲೇ ಆತ ಶಿಲೆಯ ಗುಣ–ದೋಷಗಳನ್ನು ಕಂಡು ಹಿಡಿಯಬಲ್ಲ. ದೈವಿಕತೆಯ ಎಲ್ಲ ರಹಸ್ಯವನ್ನು ಬಲ್ಲವನಾಗಿರುವನು. ಅದರ ಸೂಕ್ಷ್ಮತೆಯನ್ನು ತನ್ನ ಶಿಲ್ಪದಲ್ಲಿ ಕೆತ್ತಬಲ್ಲ! ಆಗ ಶಿಲ್ಪಕ್ಕಿಂತಲೂ ಶಿಲ್ಪಿಯೇ ಶ್ರೇಷ್ಠತಮನಾಗಿ ನಿಲ್ಲುವನು. ನಿಮಗೇ ಗೊತ್ತಿದೆಯಲ್ಲ! ಅಮರಶಿಲ್ಪಿ ಜಕಣಾಚಾರಿ ಅತ್ಯಂತ ನಾಜೂಕಾದ ಹಲವಾರು ದೇವಾಲಯಗಳನ್ನು ನಿರ್ಮಿಸಿ ದಂತಕಥೆಯಾದ ಶಿಲ್ಪಿ. ಇವನು ಕಲ್ಯಾಣ ಚಾಲುಕ್ಯರ ಹಾಗೂ ಹೊಯ್ಸಳರ ಶೈಲಿಯ ದೇವಾಲಯಗಳನ್ನು ಬೇಲೂರು ಹಾಗೂ ಹಳೇಬೀಡಿನಲ್ಲಿ ನಿರ್ಮಿಸಿದ್ದಾನೆ.
ಕರ್ನಾಟಕದ ತುಮಕೂರಿನಿಂದ ೯ ಕಿ.ಮೀ ದೂರದಲ್ಲಿರುವ ಕೈದಾಳೆ[ಕ್ರೀದಾಪುರ]ಯಲ್ಲಿ ಜಕಣಾಚಾರಿ ಜನಿಸಿದ. ಮದುವೆಯಾದ ಮೇಲೆಯೇ ಹಲವಾರು ದೇವಾಲಯಗಳನ್ನು ನಿರ್ಮಿಸುತ್ತ ಮುನ್ನಡೆದನು. ಶಿಲ್ಪ ಕಲೆಯ ತನ್ಮಯತೆಯಲ್ಲಿ ತನ್ನ ಹೆಂಡತಿಯ, ಮಗನನ್ನು ಸಹ ತಮ್ಮ ಕೆಲಸದಲ್ಲಿ ಮರೆತನು.
ಜಕಣಾಚಾರ್ಯನ ಮಗನ ಹೆಸರು ಡಂಕಣಾಚಾರ್ಯ. ಡಂಕಣಾಚರ್ಯನು ಆತನ ತಂದೆಯನ್ನು ಹುಡುಕುವುದಕ್ಕಾಗಿ ತಾನೇ ಒಬ್ಬ ಪ್ರಖ್ಯಾತ ಶಿಲ್ಪಿಯಾಗಿ ಬೆಳೆದನು. ಬೇಲೂರಿನಲ್ಲಿ ಅವನು ಶಿಲ್ಪಿಯ ಕೆಲಸಕ್ಕಾಗಿ ನೇಮಿಸಲ್ಪಟ್ಟನು, ಮಹಾನ್ ಶಿಲ್ಪಿ ಜಕಣಾಚಾರಿ ನಿರ್ಮಿಸಿದ ಒಂದು ಶಿಲ್ಪದಲ್ಲಿ ಕಲ್ಲಿನ ಪೊಟರೆಯಲ್ಲಿ ನೀರಿನಲ್ಲಿ ಬದುಕಿರುವ ಕಪ್ಪೆಯಿತ್ತು! ಇದರಿಂದ ಕೋಪಗೊಂಡ ಜಕಣಾಚಾರ್ಯರು ಅವರು ಕೆತ್ತಿದ ಶಿಲ್ಪದಲ್ಲಿ ದೋಷವಿದ್ದರೆ ತನ್ನ ಬಲಗೈಯನ್ನು ಕತ್ತರಿಸಿಕೊಳ್ಳುವುದಾಗಿ ಆ ಯುವಶಿಲ್ಪಿಗೆ ಮಾತನ್ನಿತ್ತನು. ಆ ಶಿಲ್ಪವನ್ನು ಪರೀಕ್ಷಿಸಿದ ನಂತರ, ಆ ದೋಷವಿರುವುದು ನಿಜವೆಂದು ಗೊತ್ತಾಗಿ ಜಕಣಾಚಾರ್ಯನು ತನ್ನ ವಾಗ್ದಾನದಂತೆ ತಮ್ಮ ಬಲಗೈಯನ್ನು ಕತ್ತರಿಸಿಕೊಂಡನು. ಕೊನೆಯಲ್ಲಿ, ಆ ಇಬ್ಬರು ಶಿಲ್ಪಿಗಳು ತಂದೆ, ಮಗನೆಂಬ ಸಂಬಂಧವನ್ನು ತಿಳಿದುಕೊಂಡರು. ಅದರ ನೆನಪಿಗಾಗಿಯೇ ಕಪ್ಪೆ ಚೆನ್ನಿಗರಾಯ ದೇವಸ್ಥಾನದ ಮೂರ್ತಿಯನ್ನು ಅಪ್ಪ-ಮಗ ಕೂಡಿ ಕೆತ್ತಿದರು.
ಶಿಲ್ಪಿಗಳು ಸೂಕ್ಷ್ಮತೆಯ ಆಗರ. ಧರ್ಮಸ್ಥಳದಲ್ಲಿ ಸ್ಥಾಪಿಸಿದ ಬಾಹುಬಲಿ ವಿಗ್ರಹವನ್ನು ನಾವು ಕೆತ್ತನೆಯ ಸಂದರ್ಭದಲ್ಲಿ ಶಾಲಾ ಪ್ರವಾಸಕ್ಕೆ ಹೋದಾಗ ನೋಡಿದ್ದೆವು. ಕೆತ್ತುತ್ತಿರುವ ಶಿಲೆಯ ಮೇಲೆ ಭಕ್ತಿಪೂರ್ವಕವಾಗಿ ಏರಲು ಹೇಳಿದ್ದರು. ಮೂರ್ತಿಯನ್ನು ಕೆತ್ತಿದ ರೆಂಜಾಳ ಗೋಪಾಲ ಶೆಣೈ ಕಾರ್ಕಳದವರು!
ಕಾರ್ಕಳ ಸಮೀಪದ ಮಂಗಳಪಾದ ಎಂಬಲ್ಲಿ 100 ಅಡಿ ಎತ್ತರ, 48 ಅಡಿ ಅಗಲದ ಬಂಡೆ ಗುರುತಿಸಿದರು. ಕಾರ್ಕಳದ ಶ್ರೀ ಗೋಮಟೇಶ್ವರ ಮೂರ್ತಿಯಂತೆ ಧರ್ಮಸ್ಥಳದ ಮೂರ್ತಿಯೂ ಬಯೋಟೈಟ್ ಹಾಗೂ ಕ್ವಾಟ್ಜ್ì ಖನಿಜಗಳ ಪಟ್ಟಿ ಮಿಶ್ರವಾಗಿರುವ ಸೀಣೆ ಜಾತಿಯ ಗಡಸು ಕಗ್ಗಲ್ಲಿನಿಂದ ಮಾಡಲ್ಪಟ್ಟಿದೆ. ಕೆತ್ತಿ –ಕೆತ್ತಿ ನೂರು ಅಡಿಯ ಕಲ್ಲು 39 ಅಡಿ ಎತ್ತರವಾಯಿತು.
ಶಿಲ್ಪವನ್ನು ಕೆತ್ತ ಬೇಕಾದರೆ ಶಿಲ್ಪಿ ತಪಸ್ಸನ್ನು ಮಾಡುವನು! ದೊಡ್ಡ – ದೊಡ್ಡ ಶಿಲೆಯನ್ನು ಕೆತ್ತಬೇಕಾದರೆ ಅದರ ಮೇಲೆ ಹತ್ತಲು ಜಪವನ್ನು ಮಾಡುವರು. ನಿಷ್ಠೆ ಅವರಿಗೆ ಇರಲೇ ಬೇಕಾದ ಗುಣಗಳು. ಉಳಿ-ಸುತ್ತಿಗೆಯ ಶಾಸ್ತ್ರೀಯ ಕೈಚಳಕ ಅಗಾಧವಾದುದು. ಅದಕ್ಕೆ ಏಕಾಗ್ರತೆ ಬೇಕು. ಭಾವ ಮತ್ತು ಬುದ್ಧಿಗಳ ವಿದ್ಯುದ್ ಆಲಿಂಗನಬೇಕು. ತ್ಯಾಗ, ಸಮರ್ಪಣೆ ಬೇಕು. ಶಿಲ್ಪಿ ಅದ್ವೈತ, ವಿಶಿಷ್ಠಾದ್ವೈತ, ದ್ವೈತಗಳ ಸಂಗಮ. ಆತನಿಗೆ ತಾರ ತಮ್ಯವಿಲ್ಲ! ತನ್ನ ಕಾರ್ಯಕೌಶಲ್ಯದಲ್ಲಿ ಮೋಸ ಮಾಡುವುದಿಲ್ಲ. ಮೂರ್ತಿ ಮತ್ತು ಕಲಾಕೌಶಲ್ಯದ ಕೆತ್ತನೆಗೆ ಶಿಲ್ಪಿಗಳ ಸಾಹಸ-ಸಹಾಯ ಅತ್ಯಮೂಲ್ಯವಾದುದು.
ಬಾಹುಬಲಿಯ ಬೃಹತ್ ಏಕಶಿಲಾ ಮೂರ್ತಿಯನ್ನು ಸಾಗಿಸಿದ್ದು ಸಹ ರೋಚಕ ಗಾಥೆ! ಕಾರ್ಕಳದಿಂದ 69 ಕಿ. ಮಿ. ಅಂತರದಲ್ಲಿ ಧರ್ಮಸ್ಥಳ. ಮುಂಬೈನ ಮಂಗತ್ ರಾಮ್ ಸಂಸ್ಥೆ ಈ ಬಾಹುಬಲಿ ವಿಗ್ರಹ ಸಾಗಾಟದ ಜವಾಬ್ದಾರಿ ಹೊತ್ತಿತ್ತು. ಮಾಲೀಕ ದೀನನಾಥ ಜಬಾನ್ ಈ ಸಂಸ್ಥೆಯ ಮಾಲೀಕನಾಗಿದ್ದನು. ಅದಕ್ಕಾಗಿ ದೈತ್ಯ ಗಾತ್ರದ ಟ್ರ್ಯಾಲಿ ಹಾಗೂ ಅದಕ್ಕೆ ಪೂರಕವಾಗಿರುವ ಟಯರ್-ಗಳ ನಿರ್ಮಾಣ ಮಾಡಲಾಗಿತ್ತು! 64 ಗಾಲಿಗಳುಳ್ಳ 20 ಟನ್ ಭಾರದ, 40 ಅಡಿ ಉದ್ದದ ಟ್ರ್ಯಾಲಿ ಅದಾಗಿತ್ತು. ಅದಕ್ಕೆ 170 ಟನ್ ಭಾರದ ಮೂರ್ತಿಯನ್ನು ಏರಿಸಿದ್ದು ಮಾತ್ರ ಸನ್ನೆತಂತ್ರದಿಂದ. ಅದನ್ನು ಏರಿಸುವಾಗಲೂ ನಾನಲ್ಲಿರುವುದು ವಿಶೇಷ ಅನುಭವವೇ!
ಶಿಲ್ಪಿ ಕಷ್ಟದಿಂದ ನಿರ್ಮಿಸಿದ ಮೂರ್ತಿಯನ್ನು ಒಯ್ಯುವ ಕಷ್ಟದ ಚಿಂತನೆಯನ್ನು ಮಾಡಬೇಕು. ಇದಕ್ಕಿಂತಲೂ ಪೂರ್ವದಲ್ಲಿ ನಮ್ಮ ಹಿರಿಯರು ಸುರಂಗವನ್ನು ತೋಡುವ, ಸ್ಥಳದಲ್ಲಿಯೇ ಕೆತ್ತಿದ ಬೃಹತ್ ಶಿಲಾಮೂರ್ತಿಯನ್ನು ನಿಲ್ಲಿಸುವ, ಸಾಗಿಸುವ ಕಾರ್ಯವನ್ನು ಹೇಗೆ ಮಾಡಿರಬಹುದು? ಬರೆದಿಡದ ಈ ಐತಿಹಾಸಿಕ ಕಾರ್ಯ ಅತ್ಯಂತ ವಿಸ್ಮಯಕಾರಿಯಲ್ಲವೇ?
ವೈಜ್ಞಾನಿಕ ಮನಸ್ಸಿದ್ದವನಿಗೆ ಇವುಗಳನ್ನು ನಂಬುವ ಮನಸ್ಥಿತಿ ಇರುವುದಿಲ್ಲ. ಆದರೆ ಇದು ಸತ್ಯ ಸಂಗತಿ. ಹಳೆಯದೆಲ್ಲವೂ ಅಮೃತವೆಂದು ತಿಳಿಯ ಬೇಕಾದುದಿಲ್ಲ! ಹಾಗಂತ ಹೊಸದೆಲ್ಲವೂ ಸರ್ವಗ್ರಾಹ್ಯವೂ ಅಲ್ಲ. ಕಣ್ಣು ಕಂಡುದನ್ನು ವಿಶ್ಲೇಷಿಸೋಣ. ಅದಕ್ಕೊಂದು ಸುಂದರ ರೂಪವನ್ನು ಕೊಡಲು ಪ್ರಯತ್ನಿಸೋಣ.
ಚಿತ್ರಕೃಪೆ: ಅಂತರ್ ಜಾಲ.
ಚಿತ್ರಗಳು: ಬೇಲುರು ಚೆನ್ನ ಕೇಶವ 2] ದೇವಸ್ಥಾನ 3] ಶುಕಭಾಷಿಣಿ 4] ಹಳೆಬೀಡು 5] ಹಳೆಬೀಡು 6] ಅಮರಶಿಲ್ಪಿ ಜಕ್ಕಣಾಚಾರಿ

Sunday, June 4, 2017

ಪ್ರಾಚೀನ ಜ್ಞಾನ

ಕೃತಜ್ಞತೆ: ನಂ-1 ಪತಿಕೆಗೆ

ವಿಶ್ರವಸನಿಂದ ಕುಬೇರನ ಜನ್ಮ

ಪುಲಸ್ತ್ಯನ ಮಗನಾದ ಮುನಿಶ್ರೇಷ್ಠನಾದ ವಿಶ್ರವಸನು ತಂದೆಯಂತೆಯೇ ತಪಸ್ಸಿನಲ್ಲಿ ನಿರತನಾದನು. ವಿಶ್ರವಸನ ಸದಾಚಾರ-ಸಚ್ಚಾರಿತ್ರ್ಯಗಳನ್ನು ನೋಡಿ ಮಹಾಮುನಿಯಾದ ಭರದ್ವಾಜನು ಕಡುಚಲುವೆಯಾಗಿದ್ದ ತನ್ನ ಮಗಳು ದೇವಾಂಗನೆಯನ್ನು ವಿಶ್ರವಸನಿಗೆ ಮದುವೆಮಾಡಿಕೊಟ್ಟನು. ಲೋಕದ ಪ್ರಜೆಗಳಿಗೆ ಹಿತವನ್ನುಂಟುಮಾಡುವ ಬುದ್ಧಿಯಿಂದ ಅವಳಲ್ಲಿ ವೀರ್ಯಸಂಪನ್ನನಾದ ಮತ್ತು ಪರಮಾದ್ಭುತನಾದ ಒಬ್ಬ ಪುತ್ರನನ್ನು ಪಡೆದುಕೊಂಡನು. ಮೊಮ್ಮಗನು ಹುಟ್ಟಲು ಪಿತಾಮಹನಾದ ಪುಲಸ್ತ್ಯನಿಗೂ ಆನಂದವಾಯಿತು.

“ವಿಶ್ರವಸನ ಮಗನಾಗಿರುವುದರಿಂದಲೂ ವಿಶ್ರವಸನನ್ನೇ ಹೋಲುತ್ತಿರುವುದರಿಂದಲೂ ಇವನು ವೈಶ್ರವಣನೆಂಬ ಹೆಸರಿನಿಂದಲೇ ಪ್ರಸಿದ್ಧನಾಗುತ್ತಾನೆ” ಎಂದು ವಿಶ್ರವಸುವು ಮಗನಿಗೆ ನಾಮಕರಣಮಾಡಿ ತಪಸ್ಸು ಮಾಡಲು ತಪೋವನಕ್ಕೆ ಹೊರಟುಹೋದನು. ಆಹುತಿಯಿಂದ ಹುತಮಾಡಲ್ಪಟ್ಟ ಮಹಾತೇಜಸ್ಸಿನಿಂದ ಕೂಡಿದ ಯಜ್ಞೇಶ್ವರನಂತೆಯೇ ವೈಶ್ರವಣನು ಅಭಿವೃದ್ಧಿ ಹೊಂದುತ್ತಿದ್ದನು.

ಆಶ್ರಮದಲ್ಲಿ ವಾಸಮಾಡುತ್ತಿದ್ದ ವೈಶ್ರವಣನಿಗೆ ಒಮ್ಮೆ ಜ್ಞಾನೋದಯವಾಯಿತು. ‘ಚರಿಷ್ಯೇ ಪರಮಂ ಧರ್ಮಂ ಧರ್ಮೋ ಹಿ ಪರಮಾ ಗತಿಃ’ ‘ನಾನು ಶ್ರೇಷ್ಠವಾದ ಧರ್ಮಾಚರಣೆಯನ್ನು ಮಾಡುತ್ತೇನೆ. ಏಕೆಂದರೆ ಧರ್ಮವೇ ಪರಮಗತಿಯಾಗಿದೆ’ ಎಂದು ತಪಸ್ಸು ಮಾಡಲು ನಿಶ್ಚಯಿಸಿ, ಕಠೋರ ನಿಯಮಗಳಿಗೆ ಬದ್ಧನಾದನು. ಒಂದು ಸಾವಿರ ವರ್ಷಗಳ ಕಾಲ ಅವನು ನೀರನ್ನು ಮಾತ್ರ ಕುಡಿಯುತ್ತಾ, ಮತ್ತೊಂದು ಸಾವಿರ ವರ್ಷಗಳ ಕಾಲ ಗಾಳಿಯನ್ನೇ ಆಹಾರವನ್ನಾಗಿಸಿ ಕೊಳ್ಳುತ್ತಾ, ಯಾವುದೇ ಆಹಾರವನ್ನೂ ತೆಗೆದುಕೊಳ್ಳದೇ ಒಂದು ಸಾವಿರ ವರ್ಷದವರೆಗೆ ತಪಸ್ಸು ಮಾಡಿದನು. ವೈಶ್ರವಣನ ಆ ಘೋರವಾದ ತಪಸ್ಸಿನಿಂದ ಸುಪ್ರೀತನಾದ ಮಹಾತೇಜಸ್ವಿಯಾದ ಬ್ರಹ್ಮನು ಇಂದ್ರನೇ ಮೊದಲಾದ ದೇವತೆಗಳೊಡನೆ ವೈಶ್ರವಣನ ಆಶ್ರಮದ ಬಳಿಗೆ ಬಂದನು.

ಬ್ರಹ್ಮ: “ವತ್ಸ! ನಿನ್ನ ಈ ಪರಮಾದ್ಭುತವಾದ ತಪಃಕರ್ಮದಿಂದ ನಾನು ಸಂತುಷ್ಟನಾಗಿದ್ದೇನೆ. ನೀನು ವರವನ್ನು ಪಡೆದುಕೊಳ್ಳಲು ಯೋಗ್ಯನಾಗಿರುವೆ. ನಿನಗೆ ಮಂಗಳವಾಗಲಿ; ಯಾವ ವರವು ಬೇಕೆಂಬುದನ್ನು ಹೇಳು”.

ವೈಶ್ರವಣ: ’ಪೂಜ್ಯನೇ! ಲೋಕಗಳನ್ನು ರಕ್ಷಣೆ ಮಾಡಲು ಸಾಧ್ಯವಾಗುವ ಲೋಕಪಾಲ ಪದವಿಯನ್ನು ನಾನು ಬಯಸುವೆನು.

ಬ್ರಹ್ಮ: ನಾನು ನಾಲ್ಕನೆಯ ಲೋಕಪಾಲನನ್ನು ಸೃಷ್ಟಿಸಲು ಉದ್ಯುಕ್ತನಾಗಿದ್ದೆನು. ಈಗ ನಿನ್ನ ಅಭಿಲಾಷೆಯಂತೆ ಯಮ-ಇಂದ್ರ ಮತ್ತು ವರುಣರಂತೆ ನೀನೂ ಒಬ್ಬ ಲೋಕಪಾಲನಾಗು. ಧರ್ಮಜ್ಞನೇ! ನೀನು ಒಳ್ಳೆಯ ಮನಸ್ಸಿನಿಂದ ಈ ಪದವಿಯನ್ನು ಪರಿಗ್ರಹಿಸು. ಅದರ ಜೊತೆಗೆ ನೀನು ಸಮಸ್ತವಾದ ನಿಧಿಗಳಿಗೂ ಸ್ವಾಮಿಯಾಗುವೆ. ಸೂರ್ಯಸದೃಶವಾಗಿರುವ ಆ ಪುಷ್ಪಕವಿಮಾನವನ್ನು ಸಂಚಾರಾರ್ಥವಾಗಿ ಪ್ರತಿಗ್ರಹಿಸು. ದೇವತೆಗಳಿಗೆ ಸಮಾನನಾಗು.
ಪಿತಾಮಹನು ಹೀಗೆ ಹೇಳಿ ದೇವತೆಗಳೊಡನೆ ಆಕಾಶಮಾರ್ಗದಲ್ಲಿ ಸ್ವರ್ಗಕ್ಕೆ ಹೊರಟು ಹೋದನು. ನಂತರ ಧನೇಶನು ತಂದೆಗೆ ಕೈಮುಗಿದುಕೊಂಡು ವಿನೀತನಾಗಿ “ಪೂಜ್ಯನೇ! ಪಿತಾಮಹನಿಂದ ನಾನು ಇಷ್ಟವಾದ ವರಗಳನ್ನು ಪಡೆದುಕೊಂಡಿರುವೆನು. ಆದರೆ ಪ್ರಜಾಪತಿದೇವನು ನನಗೆ ವಾಸಕ್ಕಾಗಿ ನಿವಾಸವನ್ನು ಕಲ್ಪಸಿಕೊಡಲಿಲ್ಲ. ನಾನು ವಾಸಮಾಡಲಿರುವ ಆ ಸ್ಥಾನದಲ್ಲಿ ಪ್ರಾಣಿಗಳಿಗೆ ಯಾವ ವಿಧವಾದ ಪೀಡೆಯೂ ಉಂಟಾಗಬಾರದು. ಅಂತಹ ಸ್ಥಾನವೊಂದನ್ನು ನನಗೆ ಕಲ್ಪಿಸಿಕೊಡು” ಎಂದನು.

ಮಗನ ಅಪೇಕ್ಷೆಯಂತೆಯೇ ಮುನಿಶ್ರೇಷ್ಠನಾದ ವಿಶ್ರವಸನು ‘ಧರ್ಮಜ್ಞನೇ! ನಾನು ಹೇಳುವುದನ್ನು ಲಾಲಿಸು. ದಕ್ಷಿಣ ಸಮುದ್ರದ ಆಚೆಯ ದಡದಲ್ಲಿ ತ್ರಿಕೂಟವೆಂಬ ಪರ್ವತವಿದೆ. ಅದರ ಮೇಲ್ಬಾಗದಲ್ಲಿ ವಿಶಾಲವಾಗಿಯೂ ಇಂದ್ರನ ಅಮರಾವತಿಯಂತೆಯೂ ಇರುವ ಸುಂದರವಾದ ಪಟ್ಟಣವಿದೆ. ವಿಶ್ವಕರ್ಮನಿಂದಲೇ ನಿರ್ಮಿಸಲ್ಪಟ್ಟಿರುವ ಆ ಪಟ್ಟಣಕ್ಕೆ “ಲಂಕಾ” ಎಂದು ಹೆಸರು. ಅಮರಾವತಿಯಂತೆಯೇ ಇರುವ ಆ ಲಂಕಾಪಟ್ಟಣವು ರಾಕ್ಷಸರ ವಾಸಕ್ಕಾಗಿ ನಿರ್ಮಿತವಾಗಿದೆ. ಅದು ಯಂತ್ರ-ಶಸ್ತ್ರಗಳಿಂದ ಸಮಾವೃತವಾಗಿದೆ. ಸುವರ್ಣಮಯವಾದ ಪ್ರಾಕಾರದಿಂದ ಕೂಡಿದೆ. ಲಂಕಾಪಟ್ಟಣದ ಸುತ್ತಲೂ ಕಂದಕಗಳಿವೆ. ನಿನಗೆ ಮಂಗಳವಾಗಲಿ. ನೀನು ಆ ಲಂಕಾಪಟ್ಟಣದಲ್ಲಿ ವಾಸವಾಗಿರು. ಅದರ ಹೆಬ್ಬಾಗಿಲು ಸುವರ್ಣದಿಂದಲೂ, ವೈಡೂರ್ಯಮಣಿಗಳಿಂದಲೂ ಮಾಡಲ್ಪಟ್ಟಿದೆ. ಅತ್ಯಂತ ರಮಣೀಯವಾಗಿದೆ. ವಿಷ್ಣುವಿನ ಭಯದಿಂದ ಪೀಡಿತರಾದ ರಾಕ್ಷಸರು ಆ ಲಂಕಾಪಟ್ಟಣವನ್ನು ಬಿಟ್ಟು ಓಡಿಹೋದರು. ಎಲ್ಲ ರಾಕ್ಷಸರೂ ರಸಾತಲಕ್ಕೆ ಓಡಿಹೋದುದರಿಂದ ಆ ಲಂಕಾಪಟ್ಟಣವೀಗ ಶೂನ್ಯವಾಗಿದೆ. ಈ ಕಾರಣದಿಂದಲೇ ಅಲ್ಲಿ ಯಾವ ರಾಜನೂ ಇಲ್ಲ. ಅಲ್ಲಿ ನೀನು ಸುಖವಾಗಿ ವಾಸಮಾಡಿಕೊಂಡಿರಬಹುದು. ಆದುದರಿಂದ ನೀನೀಗಲೇ ಲಂಕಾಪಟ್ಟಣಕ್ಕೆ ಹೋಗು. ಅಲ್ಲಿ ನಿನಗೆ ಯಾವ ವಿಧವಾದ ಬಾಧೆಯೂ ಉಂಟಾಗುವುದಿಲ್ಲ. ನಿನ್ನ ವಾಸವೂ ಅಲ್ಲಿ ದೋಷರಹಿತವಾಗಿರುತ್ತದೆ’ ಎಂದನು.

ತಂದೆಯ ಅಪ್ಪಣೆಯಂತೆಯೇ ವೈಶ್ರವಣನು ತ್ರಿಕೂಟಪರ್ವತದ ಶಿಖರದಲ್ಲಿದ್ದ ಲಂಕಾಪಟ್ಟಣದಲ್ಲಿ ವಾಸಮಾಡತೊಡಗಿದನು. ಅವನಲ್ಲಿ ವಾಸಮಾಡಲು ಪ್ರಾರಂಭಿಸಿದ ಸ್ವಲ್ಪ ದಿವಸಗಳಲ್ಲಿಯೇ ಅವನ ಧರ್ಮಶಾಸನದ ಪ್ರಭಾವದಿಂದಾಗಿ ಸಾವಿರಾರು ರಾಕ್ಷಸರು ಪರಮಹೃಷ್ಟರಾಗಿ ಪುನಃ ಅಲ್ಲಿಗೆ ಬಂದು ನೆಲೆಸಿದರು. ಧರ್ಮಾತ್ಮನಾದ, ರಾಕ್ಷಸಶ್ರೇಷ್ಠನಾದ, ವಿಶ್ರವಸನ ಮಗನಾದ ವೈಶ್ರವಣನು ಪರಮಪ್ರೀತನಾಗಿ ಸಮುದ್ರವೇ ಕಂದಕದ ರೂಪದಲ್ಲಿದ್ದ ಲಂಕಾಪಟ್ಟಣದಲ್ಲಿ ವಾಸಮಾಡುತ್ತಿದ್ದನು. ಕುಬೇರನು ಆಯಾ ಕಾಲಗಳಲ್ಲಿ ಪುಷ್ಪಕವಿಮಾನದಲ್ಲಿ ಕುಳಿತು ತಂದೆ-ತಾಯಿಗಳ ಬಳಿಗೂ ಹೋಗಿಬರುತ್ತಿದ್ದನು. ದೇವ-ಗಂಧರ್ವರೂ ಕುಬೇರನನ್ನು ಸ್ತೋತ್ರಮಾಡುತ್ತಿದ್ದರು. ಅವನ ಭವ್ಯವಾದ ಅರಮನೆಯು ಅಪ್ಸರೆಯರ ನೃತ್ಯದಿಂದ ಸುಶೋಭಿತವಾಗಿದ್ದಿತು.
ಕುಬೇರನು ‘ರಾಕ್ಷಸಶ್ರೇಷ್ಠ’ ಎನ್ನುವಲ್ಲಿ ತುಂಬಾ ಸ್ವಾರಸ್ಯವಿದೆ. ರಾಕ್ಷಸರ ಲಂಕೆಯ ಜೊತೆ ಪುಷ್ಪಕವಿಮಾನವೂ ಅವನ ಕೈಸೇರಿತು. ಶೂನ್ಯವಾಗಿರುವ ಸ್ಥಳಗಳನ್ನು ಯಾರದಾದರೂ, ಯಾರಿಗಾದರೂ, ಯಾವಾಗಾದರೂ ಕೊಡಬಹುದೇ? ಅದು ಸಾಧುವೇ? ‘ನಿನ್ನ ವಾಸವು ದೋಷಪೂರ್ಣವಾಗುವುದಿಲ್ಲ’ ಎಂದು ಒತ್ತಿ ಹೇಳಬೇಕಿತ್ತೇ? ಇದರ ಹಿನ್ನೆಲೆಯಲ್ಲಿ ದೋಷವಿದೆ ಎನ್ನುವ ಧ್ವನಿ ಉಂಟು!

Thursday, May 25, 2017

#ಕೇಳಿದ್ದು

ಆಸೆ ಕಮರಿ ಹೋಗುವುದಿಲ್ಲ! ನಾವೇ ಕಮರಿ ಹೋಗುತ್ತೇವೆ!!
ತೃಷ್ಣಾ ನ ಜೀರ್ಣಾ
ವಯಮೇವ ಜೀರ್ಣಾಃ
ಸಪ್ಪೆ ಮೆಲುವಾಗ ಸೊಪ್ಪಿನ ಚಿಂತೆ |
ಸೊಪ್ಪು ದೊರಕಿದರೆ ಉಪ್ಪು ಬರಲಿಲ್ಲವೆಂಬ ಚಿಂತೆ ||
ಉಪ್ಪು ದೊರಕಿದರೆ ತುಪ್ಪ ಬರಲಿಲ್ಲವೆಂಬ ಚಿಂತೆ |
ತುಪ್ಪವೇ ದೊರಕಿದರೆ ಕೊಪ್ಪರಿಗೆ ಸಿಗದೆಂಬ ಚಿಂತೆ ||
ವಿಜಯದಾಸರ ಸುಳಾದಿ
#ಕೇಳಿದ್ದು

Wednesday, May 24, 2017

ಪ್ರಾಚೀನ ಜ್ಞಾನ

ನಂ-1 ಪತ್ರಿಕೆ "ವಿಜಯವಾಣಿಗೆ ಕೃತಜ್ಞತೆ ಸಲ್ಲಿಸಿ,

ಹಾರುವ ತಟ್ಟೆ ಹಿಂದಿತ್ತೇ?

ಕಾಶ್ಯಪ ಮತ್ತು ದಿತಿಯರಿಗೆ ಜನಿಸಿದವನೇ ‘ವಜ್ರಾಂಗ’. ದಿತಿಯ ಮಕ್ಕಳೆಲ್ಲರೂ ವಿಷ್ಣುವಿನಿಂದ ಮತ್ತು ಇಂದ್ರನಿಂದ ಹತರಾದರು. ಇವರು ಅದಿತಿಯ ಮಕ್ಕಳು. ಕಾಶ್ಯಪನ ಕುಟುಂಬವೇ ಜಗದ್ವ್ಯಾಪಿಯಾಗಿ ಹರಡಿತ್ತು. ಆದರೆ ಸಹೋದರರ ಕದನದಿಂದಾಗಿ ಅವನ ಕುಟುಂಬದಲ್ಲಿ ಎಲ್ಲವೂ ಸರಿಯಾಗಿದ್ದಿರಲಿಲ್ಲ. ಒಂದು ತಾಯಿಯ ಮಕ್ಕಳೇ ಸರಿಯಿರುವುದಿಲ್ಲ! ಇನ್ನು ಹದಿಮೂರು ತಾಯಂದಿರ ಮಕ್ಕಳು ಹೇಗೆ ಸರಿಯಿದ್ದಾರು?

ವಜ್ರಾಂಗನು ತಾಯಿ ದಿತಿಯ ಗರ್ಭದಲ್ಲಿರುವ ಶಿಶುವನ್ನು ನಲ್ವತ್ತೊಂಬತ್ತು ಭಾಗಗಳನ್ನಾಗಿ ಕತ್ತರಿಸಿದ. ಈ ಮರುತ್ತುಗಳ ತಮ್ಮನೇ ವಜ್ರಾಂಗ! ಇಂದ್ರ ಮಾಡಿದ ಶಿಶುಹತ್ಯೆಯನ್ನು ತಾಯಿ ದಿತಿಯಿಂದ ಕೇಳಿದ ವಜ್ರಾಂಗನು ಇಂದ್ರನನ್ನು ತಾಯಿಯ ಬಳಿಗೆ ಎಳೆದುಕೊಂಡು ಬಂದ! ಅಷ್ಟರಲ್ಲಿ ಕಶ್ಯಪನು ಮತ್ತು ಬ್ರಹ್ಮನು ಬಂದು ಇಂದ್ರನನ್ನು ಬಿಡಿಸಿದರು. ಬಳಿಕ ಬ್ರಹ್ಮನು ವರಾಂಗಿಯೆಂಬ ತರುಣಿಯನ್ನು ಸೃಷ್ಟಿಸಿ, ವಜ್ರಾಂಗನಿಗೆ ಕೊಟ್ಟು ಮದುವೆ ಮಾಡಿದನು. ವಜ್ರಾಂಗನು ತನ್ನ ರಾಕ್ಷಸತ್ವ ನಿವಾರಣೆಗಾಗಿ ಬ್ರಹ್ಮನ ಕುರಿತು ತಪಸ್ಸು ಮಾಡುತ್ತಿದ್ದ!! ವರಾಂಗಿ ಬ್ರಹ್ಮನ ಮಗಳು! ಆದರೂ ಇಂದ್ರನು ಅವಳನ್ನು ನಾ-ನಾ ಪರಿಯಿಂದ ಪೀಡಿಸಿದ.
ವಜ್ರಾಂಗ ಬಹಿರ್ಮಖನಾಗಿ ನೋಡುವಾಗ ವರಾಂಗಿಯು ಎಲ್ಲಿಯೋ ಒಂದು ಪರ್ವತದ ಗವಿಯಲ್ಲಿ ವಿಕೃತೆಯಾಗಿದ್ದಳು. ಅವಳಿಂದ ಸಮಾಚಾರವನ್ನು ತಿಳಿದು ಮರಳಿ ತಪಸ್ಸನ್ನು ಮಾಡಿ ದೇವತೆಗಳನ್ನು ಸದೆಬಡಿಯುವ ಸಾಮರ್ಥ್ಯವುಳ್ಳ ಮಗನನ್ನು ಪಡೆದ. ಅವನೇ ತಾರಕಾಸುರ! [ಮತ್ಸ್ಯಪುರಾಣ-146]

ತಾರಾಕ್ಷ, ಕಮಲಾಕ್ಷ, ವಿದ್ಯುನ್ಮಾಲಿ ಎಂಬ ಮೂವರು ಮಕ್ಕಳು ತಾರಕಾಸುರನಿಗೆ ಜನಿಸಿದರು. ತಾರಕಾಸುರನು ವಧಿಸಲು ಸ್ಕಂದನು ಕಾರಣೀಭೂತನಾದ. ಆ ಯುದ್ಧವನ್ನು ‘ತಾರಕಾಮಯ’ ಸಂಗ್ರಾಮವೆಂದೇ ಕರೆಯುವರು.
ವ್ಯಾಖ್ಯಾನಕಾರರ ವಿವರಣೆ ಹೀಗೆದೆ : “ತಾರಕಾಮಯಃ ತಾರಕಾಸುರ ಏವ ಆಮಯಃ” “ತಾರಕಾಸುರನೇ ಒಂದು ರೋಗ”. ಆ ರೋಗವನ್ನು ಬುಡಪಾಯದಿಂದ ತೆಗೆದು ಹಾಕಿದವ ‘ಮುರುಗನ್’.

ತಾರಾಕ್ಷ, ಕಮಲಾಕ್ಷ, ವಿದ್ಯುನ್ಮಾಲಿ ಈ ಮೂವರೂ ಬ್ರಹ್ಮನ ಕುರಿತು ಘೋರವಾದ ತಪಸ್ಸನ್ನು ಮಾಡಿದರು. ಇವರ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷವಾದ. ‘ಬೇಕಾದ ವರವನ್ನು ಪಡೆಯಲು’ ಆಜ್ಞಾಪಿಸಿದ. ಇವರು ಅಮರತ್ವವನ್ನು ಕೇಳಿದರು. ‘ಅಮರತ್ವವನ್ನು ನೀಡಲು ಸಾಧ್ಯವಿಲ್ಲ. ಬೇರೆ ಯಾವುದಾದರೂ ವರವನ್ನು ಕೇಳಿ’ ಎಂದು ಬ್ರಹ್ಮನು ಹೇಳಿದನು. ಅವರು “ನಾವು ಮೂವರು ಈ ಲೋಕದಲ್ಲಿ ಮೂರು ಪಟ್ಟಣಗಳನ್ನು ನಿರ್ಮಿಸಿಕೊಂಡು ಅಲ್ಲಿಯೇ ಇದ್ದಕೊಂಡು ನಿನ್ನ ಕೃಪಾಪ್ರಸಾದದಿಂದ ಈ ಪೃಥ್ವಿಯನ್ನು ಸಂಚರಿಸುತ್ತಿರುತ್ತೇವೆ. ಒಂದು ಸಾವಿರ ವರ್ಷಗಳನಂತರ ನಾವು ಮೂವರು ಒಟ್ಟಾಗಿ ಸೇರುತ್ತೇವೆ. ನಮ್ಮ ತ್ರಿಪುರಗಳು ಆ ಸಂದರ್ಭದಲ್ಲಿ ಏಕೀಭಾವವನ್ನು ಹೊಂದುತ್ತವೆ. ಏಕೀಭಾವವನ್ನು ಹೊಂದಿದ ತ್ರಿಪುರಗಳನ್ನು ಆ ಸಮಯದಲ್ಲಿ ಯಾವ ದೇವ ಶ್ರೇಷ್ಠನು ಒಂದೇ ಬಾಣದಿಂದ ಭಗ್ನಗೊಳಿಸುತ್ತಾನೆಯೋ ಅವನೇ ನಮ್ಮ ಮೃತ್ಯುವಾಗುತ್ತಾನೆ. ‘ಹಾಗೆಯೇ ಆಗಲಿ’ ಎಂದು ಬ್ರಹ್ಮ ಹೇಳಿದ.

ಬ್ರಹ್ಮನಿಂದ ತಾವು ಅಪೇಕ್ಷಿಸಿದ ವರವನ್ನು ಪಡೆದು ಸುಪ್ರೀತರಾದರು. ಆ ಅಸುರರು ಪರಸ್ಪರವಾಗಿ ಸಮಾಲೋಚಿಸಿದರು. ತಮಗೆ ಅನುಕೂಲಕರವಾದ ಮೂರು ಪುರಗಳನ್ನು ನಿರ್ಮಿಸುವುದರ ಸಲುವಾಗಿ ದೈತ್ಯ – ದಾನವ ಪೂಜಿತನಾದ, ಮುಪ್ಪಿನಿಂದ ಪೂಜಿತನಾಗಿದ್ದ, ಮಹಾಸುರನಾದ, ದೇವಶಿಲ್ಪಿಯಾದ ವಿಶ್ವಕರ್ಮನಿಗೆ ಸಮಾನನಾದ ಮಯನನ್ನು ಆಮಂತ್ರಸಿದರು. ಧೀಮಂತನಾದ ಮಯನು ತನ್ನ ತಪಃಶ್ಯಕ್ತಿಯಿಂದ ಒಂದು ಚಿನ್ನದ ಪುರವನ್ನು, ಒಂದು ಬೆಳ್ಳಿಯ ಪುರವನ್ನು, ಮತ್ತು ಒಂದು ಕಬ್ಬಿಣದ ಪುರವನ್ನು ನಿರ್ಮಿಸಿಕೊಟ್ಟನು.

ಕಾಂಞ್ಚನಂ ದಿವಿ ತತ್ರಾಸೀದನ್ತರಿಕ್ಷೇ ಚ ರಜತಮ್ |
ಆಯಸಂ ಚಾಭವದ್ಭೌಮಂ ಚಕ್ರಸ್ಥಂ ಪೃಥಿವೀಪತೇ || [ವ್ಯಾ. ಭಾರತ. ಕರ್ಣಪರ್ವ – 33-18]
ಸುವರ್ಣದಿಂದ ನಿರ್ಮಿತವಾಗಿದ್ದ ಪುರವು ಸ್ವರ್ಗಲೋಕದಲ್ಲಿದ್ದಿತು. ಬೆಳ್ಳಿಯಿಂದ ನಿರ್ಮಿತವಾಗಿದ್ದ ಪುರವು ಅಂತರಿಕ್ಷದಲ್ಲಿದ್ದಿತು. ಲೋಹದಿಂದ ನಿರ್ಮಿತವಾಗಿದ್ದ ಪುರವು ಸುತ್ತುತ್ತಿರುವ ಚಕ್ರದ ಮಧ್ಯದಲ್ಲಿ ಭೂಮಿಯಲ್ಲಿದ್ದಿತು.

ಸ್ವರ್ಗಲೋಕದಲ್ಲಿರುವ ಸುವರ್ಣಮಯವಾದ ವಿಚಿತ್ರವಾದ ಪಟ್ಟಣವು ಮಹಾತ್ಮನಾದ ತಾರಾಕ್ಷನದಾಗಿತ್ತು. ಬೆಳ್ಳಿಯ ಪಟ್ಟಣವು ಕಮಲಾಕ್ಷನಿಗೆ ಸೇರಿತ್ತು. ಭೂಮಿಯಲ್ಲಿದ್ದ ಲೋಹದ ಪುರವು ವಿದ್ಯನ್ಮಾಲಿಗೆ ಸೇರಿತ್ತು! ತಮ್ಮ ಪಟ್ಟಣದ ಪ್ರಭಾವ ಹಾಗೂ ವಿವಿಧ ಶಸ್ತ್ರಾಸ್ತ್ರಗಳಿಂದ ದರ್ಪಿಷ್ಠರಾಗಿ ಮೂರು ಲೋಕಗಳಲ್ಲಿಯೂ ತಮ್ಮ ಆಧಿಪತ್ಯವನ್ನು ಸ್ಥಾಪಿಸಿದರಲ್ಲದೇ ತಮಗೆ ವರವನ್ನು ನೀಡಿದ ಬ್ರಹ್ಮನನ್ನೇ “ಆ ಪ್ರಜಾಪತಿ ಎಂಬವನು ಯಾರು?” ಎಂದೆನ್ನುತ್ತಾ ತಾತ್ಸಾರದಿಂದ ಕಾಣತೊಡಗಿದರು.
ತ್ರಿಪುರಗಳಲ್ಲಿ ಆಶ್ರಯಪಡೆದಿದ್ದ ದೈತ್ಯರು ಯಾವ-ಯಾವುದು ಬೇಕೆಂದು ಆಸೆಪಡುತ್ತಿದ್ದರೋ ಆ ಎಲ್ಲ ಕಾಮನಾವಸ್ತುಗಳನ್ನು ಮಯಾಸುರನು ತಕ್ಷಣ ಸಿದ್ಧಮಾಡಿಕೊಡುತ್ತಿದ್ದನು.

ಗಮನಿಸಿ: ವಿಶ್ವಕರ್ಮನಿರ್ಮಿತ ಸುವರ್ಣಪುರ, ಬೆಳ್ಳಿಯಪುರ, ಕಬ್ಬಿಣದಪುರ ಹಾರುತಟ್ಟೆಯೇ? ಇವು ಎಲ್ಲಿಂದ ಎಲ್ಲಿಗೆ ಬೇಕಾದರೂ ಚಲಿಸುತ್ತಿದ್ದವೇ? ಒಂದು ಸ್ವರ್ಗಲೋಕದಲ್ಲಿ, ಇನ್ನೊಂದು ಅಂತರಿಕ್ಷದಲ್ಲಿ, ಮತ್ತೊಂದು ಭೂಲೋಕದಲ್ಲಿ ‘ಸುತ್ತುತ್ತಿರುವ ಚಕ್ರದ ಮಧ್ಯದಲ್ಲಿ ಭೂಮಿಯಲ್ಲಿದ್ದಿತ್ತೇ! ಚಕ್ರ ಚಲನ ಶೀಲತೆಯ ಸಂಕೇತ. ಅದೇ ಈ ಪಟ್ಟಣಗಳಲ್ಲಿಯೂ ಕಂಡುಬರುವುದು. ಒಂದು ಸಾವಿರ ವರ್ಷಕ್ಕೊಮ್ಮೆ ಒಂದೇ ಸರಳರೇಷೆಯಲ್ಲಿ ಇದ್ದು ಏಕೀ ಭಾವವನ್ನು ಹೊಂದುತ್ತದೆ. ಆಗ ಇದನ್ನು ಶಕ್ತಿಶಾಲಿಯೊಬ್ಬ ನಾಶ ಪಡಿಸಬಲ್ಲ! ಗುರುತ್ವಾಕರ್ಷಣೆಯ ಸಿದ್ಧಾಂತ ಇಲ್ಲಿ ಎದ್ದು ಕಾಣುವುದು. ವಿನಾಶದ ಸೂತ್ರವೂ ಸ್ಪಷ್ಟವಾಗಿಯೇ ಇದೆ.
ಕಾಶ್ಯಪನಿಗೆ ಏಕೆ ತನ್ನ ಮಕ್ಕಳಲ್ಲಿಯೇ ಬೇಧ? ಅವನೇಕೆ ದಿತಿಯ ಮಕ್ಕಳನ್ನು ರಕ್ಷಿಸಲು ಹೋದ? ನಾ-ನಾ ಪ್ರಶ್ನರಗಳು ನಮ್ಮನ್ನು ಕಾಡುವುದು.

ಪ್ರಾಚೀನ ಜ್ಞಾನ


Saturday, May 20, 2017

ಪ್ರಾಚೀನಜ್ಞಾನ

ನಂ-1 ಪತ್ರಿಕೆ ವಿಜಯವಾಣಿಗೆ ಕೃತಜ್ಞತೆ ಸಲ್ಲಿಸಿ.

ಗರುಡ ಹನುಮರ ಹಾರಾಡುವ ಶಕ್ತಿಯ ಹಿನ್ನೆಲೆ ಯೇನು?

ವಿಷ್ಣು ದೇವತೆಗಳಲ್ಲಿಯೇ ಮಹಾಬುದ್ಧಿವಂತ! ಶಾಂತಾಕಾರ. ಪಾಲ್ಗಡಲಲ್ಲಿ ಶೇಷಶಯನಿ. ಪದ್ಮನಾಭ. ಪದ್ಮಾಕ್ಷ. ವಿಶ್ವಾಕಾರ. ಅನಂತತೆಯ ಸಂಕೇತವಾದ ಆಕಾಶವರ್ಣಿ. ಸೌಂದರ್ಯಮಯಿ. ಯೋಗಿಗಳ ಹೃದಯದ ಉದ್ಯಾನದ ಕ್ರೀಡಾರೂಪಿ, ರಸಿಕ. ಲಕ್ಷ್ಮೀಲೋಲ. ಸುದರ್ಷನ ಚಕ್ರ, ಕೌಮೋದಕೀ ಗದೆ, ಪದ್ಮ, ಶಂಖಗಳು ಇವನ ಆಯುಧಗಳು! ಶುಭ್ರವಾದ ಪೀತಾಂಬರ, ಕೊರಳಲ್ಲಿ ತುಳಸಿಹಾರ, ಶ್ರೀವತ್ಸ ಲಾಂಛನ, ತನಗೆ ಬೇಕಾದುದನ್ನೆಲ್ಲ ಪಡೆದು ಕೊಳ್ಳುವ ಚಾಕಚಕ್ಯತೆ, ಭೂಭಾರವನ್ನು ಕಡಿಮೆ ಮಾಡುವ ಹೊಣೆಯನ್ನು ಹೊತ್ತವ. ಹತ್ತು ಅವತಾರಗಳನ್ನು ಎತ್ತಿ ದುಷ್ಟಶಿಕ್ಷಣೆ, ಶಿಷ್ಟಪರಿಪಾಲನೆಯನ್ನು ಮಾಡಿದವ! ವಿಷ್ಣುವು ಸರ್ವವ್ಯಾಪಿ. ಆ ಸರ್ವವ್ಯಾಪಿ ಭಗವಂತನ ಅನಂತ, ಅಮೋಘ, ಅಚಿಂತ್ಯ, ಅನಾದಿ, ಅಗಮ್ಯ, ಅಗಾಧ ಶಕ್ತಿ, ವೈಭವಗಳ ಅಭೂತಪೂರ್ವ ವರ್ಣನೆಯೇ ವಿಷ್ಣು ಪುರಾಣ. ಇದರಲ್ಲಿ ಭಗವಂತ ಹಾಗೂ ಭಕ್ತನ ಅವಿನಾಭಾವ ಸಂಬಂಧ, ಲೋಕಾನುಗ್ರಹಕಾರಕ ಶಕ್ತಿಯ ವಿವರವಿದೆ.
ಇವನೇನಾದರೂ ವಿಮಾನದ ಕುರಿತು ಆಲೋಚಿಸಿದ್ದನೇ?
ಹಕ್ಕಿಯೇ ವಿಮಾನಕ್ಕೆ ಪ್ರೇರಣೆ. ವಿಮಾನವೂ ಹಕ್ಕಿಯನ್ನೇ ಹೋಲುವುದು. ವಿಷ್ಣುವಿನ ವಾಹನವೂ ಪಕ್ಷಿಯೇ! ‘ಗರುಡ ಗಮನ’ ಎಂದೇ ಎಲ್ಲರೂ ಹೇಳುವುದು. ಗರುಡ ಮನೋವೇಗವನ್ನು, ಬುದ್ಧಿವೇಗವನ್ನು, ಬೆಳಕಿನ ವೇಗವನ್ನು, ಶರವೇಗವನ್ನು ಹೊಂದಿರುವುದು. ಭಾರತೀಯ ತತ್ತ್ವಜ್ಞಾನದಲ್ಲಿ ಪ್ರಾಣವನ್ನು ‘ಪ್ರಾಣಪಕ್ಷಿ’ ಎಂದೇ ಗುರುತಿಸುವರು. ಓದುಗ ದೇವರಿಗೆ ಒಂದು ಕಥೆಯನ್ನು ಜ್ಞಾಪಿಸಬಹುದು. ಒಂದು ರಾಕ್ಷಸ ಏಳು ಸಮುದ್ರಗಳ ಆಚೆ ಒಂದು ಗಿಣಿಯಲ್ಲಿ ತನ್ನ ‘ಜೀವಪಕ್ಷಿ’ಯನ್ನು ಇಟ್ಟಿದ್ದ! ರಾಜಕುಮಾರ ಏಳುಸಮುದ್ರವನ್ನು ದಾಟಿ ಆ ಗಿಣಿಯ ಕುತ್ತಿಗೆಯನ್ನು ತಿರುಚಿ ಪ್ರಾಣಹರಣ ಮಾಡಿದ. ಪ್ರಾಣಪಕ್ಷಿಯು ಹಾರಿಹೋದ ಮೇಲೆ ಇರುವುದು ಯಾರಿಗೂ ಬೇಡವಾದ ದೇಹಮಾತ್ರ! ದೇಹದ ಸಂಸ್ಕಾರದ ಅಂಗಗಳಲ್ಲಿ ‘ಗರುಡ + ಪುರಾಣ’ ಓದುವ ಅಭ್ಯಾಸವಿದೆ. ಅಂದರೆ ಪ್ರಾಣಪಕ್ಷಿಯ ಪ್ರಯಾಣ! ಹಲವು ದೇವತೆಗಳ ವಾಹನವು ಪಕ್ಷಿಯೇ ಆಗಿದ್ದರೂ ಗರುಡನಷ್ಟು ಪ್ರಭಾವ ಶಾಲಿಯಲ್ಲ.

ಸರಸ್ವತಿ ಮತ್ತು ಷಣ್ಮಖರ ವಾಹನವಾದ ‘ನವಿಲು ರಾಷ್ರೀಯ ಪಕ್ಷಿ’. ‘ಹಂಸಧ್ಯಾನ’ ಎಂದರೆ ’ಶ್ವಾಸಧ್ಯಾಸ’ ... ಎಂದರೆ ಶ್ವಾಸದ ಮೇಲೆ ಗಮನ. ಹಂಸ ಬ್ರಹ್ಮಜ್ಞಾನದ ಸಂಕೇತ. ಹಂಸ ಧ್ಯಾನವೇ ’ಪರಮಹಂಸ’ತ್ವವನ್ನು ನೀಡುವುದು. ಹಂಸದ ಇನ್ನೊಂದು ಗುಣ, ನೀರನ್ನು ತ್ಯಜಿಸಿ ಹಾಲನ್ನು ಸ್ವೀಕರಿಸುವುದು. ಹಂಸಪಕ್ಷಿ ಶರಣಾಗತಿಯ ಸಂಕೇತ. The swan is a symbol of peace and tranquility. ಶಾಂತಿ ಮತ್ತು ದ್ವಂದ್ವನಿವಾರಣೆ. ನಳ-ದಮಯಂತಿಯರ ಗುಣ ವರ್ಣನೆ… ಹಂಸಸಂದೇಶ. [ವನಪರ್ವ-53] ಸಂ.4

ಪಾರಿವಾಳವು ಬಹಳ ಮಹತ್ವವಾದುದು. ಪಾರಿವಾಳ ಅತ್ಯಂತ ಜಾಣಪಕ್ಷಿ. Doves are symbols of love, Peace or as messanger. ಪಾರಿವಾಳವು ಪ್ರೇಮ, ಶಾಂತಿ ಮತ್ತು ವಾರ್ತಾವಾಹಕದ ಸಂಕೇತ. “ಶಾಂತಿ ಸಂಕೇತ” ಎಂದು ಭಾವಿಸಲಾದ ಪಕ್ಷಿ [ಕನ್ನಡ ರತ್ನಕೋಶ. ಶಿವರಾಮ ಕಾರಂತ]
ಪಾರಿವಾಳದ ಕುರಿತು ಅನೇಕ ಕಥೆಗಳಿವೆ. ಪಾರಿವಾಳವನ್ನು ರಕ್ಷಿಸುವುದಕ್ಕಾಗಿ ಶಿಬಿಯು ತನ್ನ ತೊಡೆಯ ಮಾಂಸವನ್ನು ಕತ್ತರಿಸಿ ಕೊಟ್ಟನು. [ವನಪರ್ವ-131 ಸಂಪುಟ-5] ಪಾರಿವಾಳವನ್ನು ಬೇಹುಗಾರಿಕೆಗೂ ಬಳಸುವರು! ಗುಜರಾತಿನ ಸಲಾಯ ಎಸ್ಸಾರ ಬಂದರಿನಲ್ಲಿ ಕಾಲಿನಲ್ಲಿ ಎಲೊಕ್ಟ್ರೋನಿಕ್ ಚಿಪ್ ಇರುವ, ಅರೇಬಿಕ್ ಭಾಷೆಯಲ್ಲಿ ಸಂದೇಶ ಇರುವ ಪಾರಿವಾಳವು ಕಂಡು ನಾ-ನಾ ಊಹೆಗಳಿಗೆ ಕಾರಣವಾದುದು ನಂ-1 ಪತ್ರಿಕೆ ವಿಜಯವಾಣಿಯು 29-3-2014ರಂದು ವರದಿಮಾಡಿತ್ತು. ಯುನಾಟೆಡ್ ಕಿಂಗ್ಡಮ್ನಲ್ಲಿ 1 ಎಪ್ರಿಲ್ ಒಂದು 1918ರಲ್ಲಿ [98 ವರ್ಷ] ಸ್ಥಾಪಿತವಾದ ರೊಯಲ್ ಎರ್ ಫೋರ್ಸನ ಚಿಹ್ನೆ “ಪಾರಿವಾಳ”

ಆದರೆ ಗರುಡನವೇಗ ಮತ್ತು ಗಮನ ಎಲ್ಲ ಪಕ್ಷಿಗಳಿಂಗಿಂತಲೂ ಪ್ರಧಾನವಾದುದು. ಗರುಡಕ್ಕೆ ಹಾವೇ ಆಹಾರ. ಇಂಧನ! ವಿಷವೇ ಅದರ ಹಾರಾಟದ ಮೂಲ. ಗರುಡನಿಗೆ ರೆಕ್ಕೆ ಇದ್ದರೆ ಶ್ರೀರಾಮನ ಪರಮಭಕ್ತ ಹನುಮಂತನಿಗೆ ರೆಕ್ಕೆಯ ಬದಲು ಬಾಲವಿದೆ. ಇವನ ವಾಯುಸಂಚಾರದ ಚಲನೆಗೆ ಬಾಲವೇ ಕಾರಣ. ಬಾಲವೇ ನಿಯಂತ್ರಕ. ತನ್ನ ಬಾಲದ ಬಲದಿಂದಲೇ ಸೂರ್ಯನನ್ನು ನುಂಗಲು ಹೋದವ. ಸೂರ್ಯಗೋಲದ ಭಯವಿಲ್ಲದೆಯೇ, ಸುಟ್ಟು ಹೋಗದೇ ಇರುವವ. ಶ್ರೀರಾಮ-ಲಕ್ಷ್ಮಣರನ್ನು ಋಷ್ಯಮೂಕಕ್ಕೆ, ರಾಮಸೇತುವನ್ನು ದಾಟಬೇಕಾದರೆ ಹೆಗಲಿನ ಮೇಲೆ ಹೊತ್ತು ಸಾಗಿದವ. ರಾವಣನ ಮುಂದೆ ತನ್ನ ಬಾಲದ ಮೇಲೇ ಕುಳಿತವ. ಹಿಮಾಲಯದಿಂದ ಸಂಜೀವಿನಿ ಬೆಟ್ಟವನ್ನು ಎತ್ತಿಕೊಂಡು ಬಂದವ.

ಹನುಮಂತನ ಚಲನೆಗೆ ಸೂರ್ಯಪ್ರಕಾಶವೇ ಕಾರಣವಾಗಿತ್ತು. ಭಾರತೀಯರು ಈ ಹಿಂದೆಯೇ ಸೋಲಾರ ಪ್ರಕಾಶ, ಸೂರ್ಯಶಕ್ತಿಯನ್ನು ಕಂಡು ಕೊಂಡಿದ್ದರೇ! ಅದಕ್ಕೇ ಯೋಗದಲ್ಲಿ ಸೂರ್ಯನಮಸ್ಕಾರ, ಮಂತ್ರದಲ್ಲಿ ಗಾಯತ್ರಿ ಪ್ರಚಲಿತವಾಯಿತೇ? ಈಗಲೂ ಸೂರ್ಯಶಕ್ತಿಯಿಂದ ವಿಮಾನವನ್ನು ಚಲಾಯಿಸುವ ಸಂಶೋಧನೆ ಶರವೇಗದಿಂದ ನಡೆಯುತ್ತಿದೆ. 3 ಡಿಸೆಂಬರ್ 2009ರಂದು ಪ್ರಥಮ ಪ್ರಯೋಗ ನಡೆಯಿತು. ಈ ವಿಮಾನಗಳು ಐವತ್ತು ಕಿಲೋಮೀಟರ್ ಒಂದು ತಾಸಿಗೆ ಚಲಿಸುವುದು. ಸ್ವಿಜರ್ಲೆಂಡ್ನ ಸ್ವಿಸ್ ಇಂಜನೀಯರ್ ಅಂದ್ರೆಬೋರ್ಸಚೆಬೆರ್ಗ್ [Andr’e Borschberg] ಮನಃಶಾಸ್ತ್ರಜ್ಞ ಬೆರ್ಟೆಂಡ್ ಪಿಕ್ಕಾರ್ಡ [Bertrand Piccard] ಸಹಾಯಕ ಸಂಶೋಧಕರೇ ಇದನ್ನು ಚಲಾಯಿಸುತ್ತಿದ್ದರು.
[ಚಿತ್ರದಲ್ಲಿ ಪೂರ್ಣ ಲೇಖನ ಕೊಡಲು ಸಾಧ್ಯವಾಗದಿರುವುದಕ್ಕಾಗಿ,]

ಹೆಸರಿಗೂ ಪುರಾಣವೇ?

  Kavita Gireesh   "ಹೆಸರಿಗೂ ಪುರಾಣವೇ"        ಪಕ್ಕದ ಮನೆಯಲ್ಲಿ ನಾಮಕರಣ   ನಾಮಕರಣ ಅಂತ ಪಕ್ಕದಮನೆ ನಾರ್ತ್ ಇಂಡಿಯನ್ ಫ್ಯಾಮಿಲಿಯವರು ಬೆ...