ಬಾಳಿನ
ಬಹು ಬಗೆಯ ಮುಖಗಳು.
ಋಗ್ವೇದ ಕಾಲದ
ಜೀವನವನ್ನು ಕಡೆದು ನೋಡಿದರೆ… ನಮಗೆ
ಲಭ್ಯಯವಾಗುವುದು ಸುತ್ತಲೂ ಪ್ರಕೃತಿಯ ಭಯಂಕರ ವಿರೂಪಕತೆ! ಭೀಷಣವಾದ ವಿರಾಟಸ್ವರೂಪ. ನಿಸರ್ಗದ
ರೋಮಾಂಚಕವಾದ ಗತಿಶೀಲತೆ, ಪ್ರಕೃತಿಯ ಲಲಿತವಿಲಾಸದ ನೃತ್ಯದ ಹಿಂದೆಯೇ… ವಿಧ್ವಂಸಕವಾದ ರುದ್ರತಾಂಡವ. ಉನ್ಮತ್ತವಾದ
ಭೀಮಮೃಗಗಳ ಮೃಗೀಯ ಕ್ರೌರ್ಯ. ಮನುಷ್ಯ ಬದುಕಲು ಹರಸಾಹಸ ಪಡಬೇಕಾಗಿತ್ತು!
ಜೀವನವನ್ನೇ
ಜರ್ಜರಿತಗೊಳಿಸುವ ಆಧಿ-ವ್ಯಾಧಿಗಳ ಸಂತಾಪದಿಂದ ಅನುಭವಿಸುವ ನಿರಂತರ ವ್ಯಥೆ. ಅರಿಯಲು
ಸಾಧ್ಯವಿಲ್ಲದ ದೈವ-ಪ್ರಕೃತಿಯ ಹಸ್ತದಲ್ಲಿ ವಶರಾಗಿ ಸಾವು-ನೋವಿನ ವಿಚಿತ್ರ ಆಕ್ರಂದನ. ವಿಷವರ್ತುಲಚಕ್ರದ
ಪರಿಭ್ರಮಣದಲ್ಲಿ ಭ್ರಮೆಗೊಂಡ ಮಾನವನ ಪ್ರಜ್ಞೆ, ಅಂತರಂಗದಲ್ಲಿಯೇ ಅಡಗಿ ಹೋಯಿತು. ನಿತ್ಯ-ನಿರಂತರ
ಸಂಭವಿಸುವ ಸದಸದ್ವಿವೇಕದ ದಾರುಣ ದ್ವಂದ್ವ! ಶಾಂತಿಗಾಗಿ, ಸುಖಕ್ಕಾಗಿ ಹಲುಬಿ, ಹಂಬಲಿಸಿ ವಿಫಲನಾದ!
ಜೀವಿಗಳ ರೋಗಗಳು ಆಗ ಆಕಸ್ಮಿಕವಾಗಿತ್ತು! ಅಸಹಾಯ ಕಾರಣಗಳು…
ಜೀವನಪ್ರವಾಹದ ಗತಿ-ಸ್ಥಿತಿಗಳ ಚಿತ್ರವನ್ನು ಋಗ್ವೇದವು ನಮ್ಮ ಕಣ್ಣ ಮುಂದಿರಿಸುತ್ತದೆ. ಬದುಕೇ ನೋವು-ನಲಿವಿನ ಹಾಸಿಗೆ! ಈ ಪ್ರಕೃತಿಗೇ ಅನಂತಾನಂತ
ಮುಖಗಳು! ಉತ್ತರ ಹುಡುಕುವುದಕ್ಕಾಗದೇ ‘ನ ಇತಿ’ [ಇದಲ್ಲ] ಎಂದೇ ಮುಂದೆ ಸಾಗ ಬೇಕಾಗುತ್ತದೆ!!
ಕಾಣದ ಕೈಯ ಪ್ರಬಲ
ಶಕ್ತಿ.. ಕಾಣುವ ಪ್ರಪಂಚದಲ್ಲಿ ಜೀವದ ನಡೆ.. ಇವುಗಳ ನಡುವೆ.. ಸಂತೋಷ-ದುಃಖಗಳ ಆಟ! ಬದುಕು
ಬಂಡಿಯಿಲ್ಲದೇ… ಸಾರಥಿಯೂ ಇಲ್ಲದೇ ತನಗೆ ಕಂಡಂತೆ ಓಡುವುದು. ಇದರ
ಸುದೀರ್ಘ ನಡೆಯ ಕಥೆ-ಚರಿತ್ರೆಯೇ "ವೇದ". ಸುಭಾಷಿತ ಅದಕ್ಕಿಂತಲೂ ಹಿರಿಮೆ
ಪಡೆಯುವುದು. ಆದುದರಿಂದಲೇ ವೇದ ಸುಳ್ಳಾದರೂ ‘ಗಾದೆ’ [ಸುಭಾಷಿತ] ಸುಳ್ಳಲ್ಲ ಎನ್ನುವುದು. ವೇದ
ಪಠ್ಯ. ಗಾದೆ ಅನುಭವ. ಅದರಿಂದಲೇ ವೇದವು ಮಾನವನ ಇತಿಹಾಸವಾಗಿ ನಿಲ್ಲುವುದು. ವೇದವು ಅನಂತವಾದುದು.
ಅದನ್ನು ನಾಲ್ಕುಭಾಗಗಳನ್ನು ಮಾಡಿದವರು ವ್ಯಾಸರು. ವ್ಯಾಸವೆಂದರೆ ವೃತ್ತದ ಪರಧಿಯನ್ನು
ಕೇಂದ್ರಬಿಂದುವಿನಿಂದ ಕೂಡಿಸುವ ಸರಳ ರೇಷೆ. ಗಣಿತ ಶಾಸ್ತ್ರದ ಪ್ರಕಾರ ಸರಳ ರೇಷೆಯಲ್ಲಿ ಸರಳತೆ
ಇಲ್ಲ. ಜಟಿಲತೆ ಇದೆ.
ಋಕ್ ಸಂಹಿತೆಯಲ್ಲಿ
ನಿರೂಪಿತವಾಗಿರುವ, ಯಜ್ಞಪ್ರಕ್ರಿಯೆಯಲ್ಲಿ ಉಪಯೋಗಿಸಲ್ಪಡುವ ತುಪ್ಪ.. ಕರಿಯಳ್ಳು.. ದರ್ಭೆ..
ಅನೇಕ ದ್ರವ್ಯಗಳು ವಿಶೇಷವಾಗಿ ವಸ್ತು ಹಾಗು ಪದಾರ್ಥಗಳಲ್ಲಿ ನಿಗೂಢವಾಗಿರುವ ರೋಗನಾಶಕ ಶಕ್ತಿಯ
ಬಗೆಗೆ ಆಯುರ್ವೇದವಿದರು ವಿಶೇಷ ಅನುಸಂಧಾನ ಮಾಡುವರು! ಆಯುರ್ವೇದವನ್ನು ರಕ್ಷಿಸಿಕೊಳ್ಳುವುದು ಇಂದಿನ
ಅತ್ಯಂತ ಮಹತ್ತ್ವದ ಕಾಳಜಿಯಾಗಿದೆ. ಅಂತಃಕರಣ ಚಿಕಿತ್ಸೆಯ ವಿಷಯವಾಗಿ ಋಗ್ವೇದದ ದೈವೀ
ಪ್ರಾರ್ಥನೆಗಳಿವೆ. ವೇದಗಳು ನೀಡುವ ಮಾರ್ಗದರ್ಶನವು ಮಾನಸಿಕ ರೋಗವಿಜ್ಞಾನದಲ್ಲಿ ಮಹತ್ತರ
ಸ್ಥಾನವನ್ನು ಪಡೆದಿದೆ. ಅದೊಂದು ಮನಃಶಾಸ್ತ್ರವೂ ಹೌದು. ಆದರೆ ಸಂಪೂರ್ಣವಾಗಿ ನಮಗೆ ಲಭ್ಯವಿಲ್ಲ! 'ಹಿತ್ತಲಗಿಡ ಮದ್ದಲ್ಲ’
ಎನ್ನುವಂತೆ... ಹಳ್ಳಿಯಲ್ಲಿ ಕೊಡುವ ‘ಔಷಧಿಯು' ಇನ್ನೊಬ್ಬರಿಗೆ ಉಪದೇಶಿಸದೇ ಸಾಯುತ್ತಿದೆ. ಇದು ಮಾನವನ
ಕು-ಸಂಕುಚಿತತೆಗೆ ಕಾರಣವಾಗಿದೆ. ಅದಕ್ಕಾಗಿ ದುಃಖ ಪಡಬೇಕಾಗಿದೆ.
ಸಿದ್ದಾಪುರದ ಒಂದು ವೈದ್ಯಕುಟುಂಬದಲ್ಲಿ ಹದಿನಾರು
ಗುಂಡುಗಳು ಇವೆ. ಅದನ್ನು ಹೇಗೆ ತಳೆಯಬೇಕೆನ್ನುವುದೇ ತಿಳಿಯದೇ ಬಾವಿಯಲ್ಲಿ ಹಾಕಿದ್ದಾರೆ. ಆ
ಗುಂಡುಗಳು ಕ್ಯಾನ್ಸರ್ ನಿಂದ ಹಿಡಿದು ಎಲ್ಲ ರೋಗಗಳಿಗೂ ಬರುತ್ತದೆಯಂತೆ!
ರಾಮಾಯಣದಲ್ಲಿ
ಶ್ರೀರಾಮನು ವನವಾಸಕ್ಕೆ ಹೋದ. ದಶರಥ ಸತ್ತು ಹೋದ. ಭರತನು ಕೇಕೆಯರಾಜ [ಮಾವನ] ಮನೆಯಲ್ಲಿ ಇದ್ದ.
ಅವನು ಅಯೋಧ್ಯೆಗೆ ಬರಲು ವ್ಯವಸ್ಥೆಯನ್ನು ನೋಡಬೇಕು. ಈ ನದಿಯಿಂದ ಮುಂದಿನ ನದಿಗೆ ಹೋಗಲು ಕುದುರೆ.
ಆ ನದಿಯಿಂದ ಮುಂದಿನ ನದಿಗೆ ಹೋಗಲು ಕುದುರೆ. ಆದರೂ ಕೇಕೆಯರಾಜನ ಮನೆಯಿಂದ ಅಯೋಧ್ಯೆಗೆ ಬರಲು
ಏಳುರಾತ್ರಿ ಬೇಕಾಯಿತು. ಎಂಟನೆಯ ದಿನ ಮುಂಜಾನೆ ಅಯೋಧ್ಯೆಯನ್ನು ಸೇರಿದ.
ಕೇವಲ ನಲ್ವತ್ತು ವರ್ಷಗಳಹಿಂದೆ ನೋಡಿದರೆ ಆದ
ಬದಲಾವಣೆಗಳು, ನಮ್ಮನ್ನು ದಿಗ್ಭ್ರಮೆ ಗೊಳಿಸುವುದು. ನಾಲ್ಕುನೂರು ಕಿ. ಮಿ. ದೂರದಿಂದ ಬರಬೇಕೆಂದರೆ ನಡುವೆ ಇರುವ
ಹೊಳೆ-ಹಳ್ಳ-ನದಿಗಳನ್ನು ದಾಟಿಬರಲು ಕನಿಷ್ಟ ಐದು ದಿನಗಳು ಬೇಕಾಗುತ್ತಿತ್ತು. ಉದಾಹರಣೆಗೆ
ದಕ್ಷಿಣಕನ್ನಡದ ತುದಿಯಿಂದ ಉತ್ತರಕನ್ನಡದ ಬುಡಕ್ಕೆ ಬರಲು ಅಷ್ಟು ದಿನಗಳೇ ಬೇಕಾಗಿತ್ತು!
ಸೇತುವೆಗಳಾದ
ಮೇಲೆ... ಒಂದೇ ದಿನದಲ್ಲಿ ಹೋಗಿಬರಲು ಸಾಧ್ಯ! ಮನುಷ್ಯ ತನ್ನ ಬದ್ಧಿಶಕ್ತಿಯಿಂದ ಹಲವು ತಾಂತ್ರಿಕ
ವಿಧಾನಗಳನ್ನು ನಿರ್ಮಿಸಿ.. ವಿಜ್ಞಾನದ ಅಡಿಪಾಯಗಳನ್ನು ಸೃಷ್ಟಿಸಿದ್ದಾನೆ.
ವಿಜ್ಞಾನದಿಂದ ಹಲವಾರು ಪ್ರಯೋಜನಗಳು… ಸಂಕಷ್ಟಗಳು ಉಂಟಾದುದು ಅಚ್ಚರಿಯಾದರೂ..
ನಿಜವೇ!
ಪಂಚಭೂತಗಳು ಎಲ್ಲ
ಪ್ರಾಣಿಗಳ ಉತ್ಪತ್ತಿಗೂ-ಲಯಕ್ಕೂ ಕಾರಣ ಸ್ಥಾನಗಳಾಗಿವೆ. ಪಂಚಭೂತಗಳಿಂದಲೇ ಜನನ ಮತ್ತು ಮರಣ. ಯಾವ
ರೀತಿಯಲ್ಲಿ ಸಮುದ್ರದಲ್ಲಿ ಹುಟ್ಟಿದ ಅಲೆಗಳು ಪುನಃ ಸಮುದ್ರದಲ್ಲಿಯೇ ಲೀನವಾಗುತ್ತದೆಯೋ ಅದೇ
ರೀತಿಯಲ್ಲಿ ಪರಮಾತ್ಮನಿಂದ ಹುಟ್ಟಿದ ಪಂಚಮಹಾಭೂತಗಳು ಎಲ್ಲ ಪ್ರಾಣಿಗಳೊಡನೆ ಪರಮಾತ್ಮನಲ್ಲಿಯೇ ಲೀನವಾಗಿ
ಹೋಗುತ್ತದೆ. ಆಮೆಯು ಮೊದಲು ತನ್ನ ಅಂಗಗಳೆಲ್ಲವನ್ನೂ ಹೊರಚಾಚಿದ್ದು ಪುನಃ ಎಲ್ಲ ಅಂಗಗಳನ್ನೂ
ಒಳಸೆಳೆದು ಕೊಳ್ಳುತ್ತದೆಯೋ ಅದೇ ರೀತಿಯಲ್ಲಿ ಸಕಲ ಭೂತಾತ್ಮನಾದ ಪರಮಾತ್ಮನು ಮೊದಲು ತನ್ನಲ್ಲಿಯೇ
ಲೀನವಾಗಿದ್ದ ಪ್ರಪಂಚವನ್ನು ಸೃಷ್ಟಿಸಿ ಪುನಃ ತನ್ನಲ್ಲಿಯೇ ಲೀನಗೊಳಿಸುವನು’. [ಮ. ಶಾ. ಅ-194]
...... ಎಂದು ಶ್ರೀಮದ್ಮಹಾಭಾರತ ಹೇಳುವುದು.] ಈ ಜಗತ್ತಿನಲ್ಲಿ ದ್ರವ್ಯವನ್ನು ಅಳೆಯುವ
ಅಳತೆಯಂತೆ ವಸ್ತ್ರವನ್ನು ಅಳೆಯಲಾಗದು. ದೂರವನ್ನು ಅಳೆಯಲಾಗದು. ಸಾಮಗ್ರಿಯನ್ನು ಅಳೆಯಲು ತಕ್ಕಡಿ
ಬೇಕು. ಉದ್ದ, ತೂಕ, ಚದುರ ಅಳತೆ, ಘನ ಅಳತೆ, ದ್ರವ ಅಳತೆ…
ಹೀಗೆ ನೂರೆಂಟು ಬಗೆಯಿದೆ.
ಅದರಲ್ಲಿ ಒಂದಾದ "ಕಾಲ
ಸಬಂಧಿಯಾದ ವಿವರ" ನೋಡೋಣ... 1 ಕ್ಷಣ ರೆಪ್ಪೆಹೊಡೆಯುವಷ್ಟು ಕಾಲ =1/270 ಸೆಕೆಂಡ, 2
ಕ್ಷಣ=1 ಲವ [1/135 ¸ಸೆಕೆಂಡ್]
2 ಲವ= 1ನಿಮಿಷ[2/135 ಸೆಕೆಂಡ] 18 ನಿಮಿಷ= 1 ಕಾಷ್ಟಾ[4/15 ಸೇಕೆಂಡ್], 30 ಕಾಷ್ಠಾ= 1 ಕಲಾ [8ಸೆಕೆಂಡ್]
30 ಕಲಾ = 1ಕ್ಷಣ (240 ಸೆಕೆಂಡ್ - 4 ನಿಮಿಷ) 12= ಕ್ಷಣ= 1 ಮುಹೂರ್ತ [48 ನಿಮಿಷ] , 30=ಮುಹೂರ್ತ=
24 ಘಂಟೆಗಳ 1 ದಿನ, 15 ದಿನ = 1 ಪಕ್ಷ, 30 ದಿನ = 1 ಮಾಸ, 2 ಮಾಸ = 1 ಋತು, 6 ಋತು ಅಥವಾ 12
ಮಾಸ = 1 ಸಂವತ್ಸರ.
ಸಂವತ್ಸರವು ಚಾಂದ್ರ,
ಸೌರ, ಸಾವನ, ನಕ್ಷತ್ರ, ಬಾರ್ಹಸ್ಪತ್ಯ- ಎಂದು ಐದು ವಿಧ. ಚಾಂದ್ರ=ಶುಕ್ಲಪಾಡ್ಯದಿಂದ ಅಮಾವಸ್ಯೆಯ
ಪರ್ಯಂತ 1 ತಿಂಗಳು, ಹುಣ್ಣಿಮೆಯ ದಿನ ಚಿತ್ರಾ ನಕ್ಷತ್ರವಿದ್ದರೆ ಚೈತ್ರ. ವಿಶಾಖವಿದ್ದರೆ ವೈಶಾಖ.
ಹೀಗೆ 12 ತಿಂಗಳಿಗೆ - ಅಧಿಕಮಾಸವಿದ್ದರೆ 13 ತಿಂಗಳಿಗೆ- ಪ್ರಭವ, ವಿಭವಾದಿಗಳು ಚಾಂದ್ರ
ಸಂವತ್ಸರಗಳು. ಕೃಷ್ಣ ಪಾಡ್ಯದಿಂದ ಹುಣ್ಣಿಮೆಯವರೆಗೆ 1 ತಿಂಗಳೆಂಬ ಗಣನೆಯೂ ಉಂಟು. ಇದು ದಕ್ಷಿಣ
ದೇಶದಲ್ಲಿ ಬಳಕೆಯಲ್ಲಿಲ್ಲ. ಆದರೂ ಎಲ್ಲೆಡೆಯೂ ಅಕ್ಷಾಂಶ-ರೇಖಾಂಶಗಳನ್ನು ಅವಲಂಬಿಸಿ ಸಮರ್ಪಕವಾದ
ಕಾಲಗಣನೆಯನ್ನು ಕಂಡು ಹಿಡಿಯ ಬೇಕಾಗುವುದು. ಅದು ದೇಶ-ದೇಶಕ್ಕೂ ಬದಲಾಗಿರುವುದು. ಚಿಕ್ಕ ಉದಾರಹಣೆ
ಎಂದರೆ ಭಾರತೀಯ ಕಾಲಪ್ರಮಾಣದಂತೆ ‘ದುಬೈ’ 1.30 ಘಂಟೆ ಹಿಂದಿರುತ್ತದೆ. ‘ಮಲೇಶಿಯಾ’ 2.30 ತಾಸು
ಮುಂದಿರುತ್ತದೆ. ಭಾರತದಲ್ಲಿ ರಾತ್ರಿಯ ಹನ್ನೆರಡು ಘಂಟೆಗೆ ಬೆಳಗಾಗುತ್ತದೆ. ಮಧ್ಯಾನ್ಹದ
ಹನ್ನೆರಡು ಘಂಟೆಗೆ ಸಂಜೆ ಪ್ರಾರಂಭವಾಗುತ್ತದೆ! ಅಂತಹ ಕಾಲಗಣನೆಗೆ ಪ್ರಪಂಚದ ಮನುಷ್ಯರು
ಹೊಂದಿಕೊಂಡರು. ಹೊಂದಾಣಿಕೆಯೇ ಬದುಕು!