Anant Vaidya

Anant Vaidya

Tuesday, November 24, 2015

1] ವೇದ ವಿಜ್ಞಾನದ ಬೆಳಕಿನಲ್ಲಿ... [ಪ್ರಾಚೀನ ಜ್ಞಾನ] [4-4-2015]
     ಅರಿವು... ಅರಿವಿಲ್ಲದಿರುವಿಕೆಯ ಹೋರಾಟವೇ ಜೀವನ. ಬೆನ್ನಿಗೆ ಕಣ್ಣಿಲ್ಲ! ಅದಕ್ಕೇ ಬೆನ್ನಿಗೆ ಚೂರಿಹಾಕಿದ ಎನ್ನುವುದು. ಒಳಗಿನ ಅರಿವಿಲ್ಲ! ಹೊರಗಿನ ಅರಿವೂ ಇಲ್ಲ! ನಮಗೆಷ್ಟು ನರಗಳಿವೆ ತಿಳಿಯದು! ನಮಗೆಷ್ಟು ಕೂದಲಿವೆ ತಿಳಿಯದು. ನಮ್ಮ ಜನನದ ಸಂದರ್ಭದಿಂದಲೇ ಹೋರಾಟವು ಪ್ರಾರಂಭವಾಗುವುದು! ಕೋಟ್ಯಾಂತರ ವೀರ್ಯಾಣುಗಳು  ಪರಸ್ಪರ ಹೋರಾಡಿ... ಗೆದ್ದ ವೀರ್ಯಾಣುಗಳೇ ಗರ್ಭಾಶಯವನ್ನು ಪ್ರವೇಶಿಸುವುದು!
   'ಅಣು' ಪ್ರ್ರಪಂಚದ ಕೇಂದ್ರ ಬಿಂದು. 'ಅಣು'ವೇ ಬದುಕು. ಅಣುಸ್ಫೋಟ ಏನೆಲ್ಲ ಅನಾಹುತವನ್ನು ಮಾಡುವುದಲ್ಲವೇ? ನಮ್ಮದಲ್ಲದ ನಮ್ಮದಾಗಿರುವ ಅಣುಗಳಿಂದ ಜೀವನದಿಯನ್ನು ಸೃಷ್ಟಿಸಬೇಕು.  
     ಹುಟ್ಟು-ಸಾವುಗಳೆಂಬ ಎರಡು ಪುಟಗಳನ್ನು ಕಳೆದು ಕೊಂಡ ಒಂದು ಪುಸ್ತಕ ಈ ಬದುಕು. ಒಟ್ಟಿನ ಮೊದಲೂ ತಿಳಿಯದು. ಸಾವಿನ ನಂತರ ಏನೆಂದೂ ತಿಳಿಯದು. 'ಹೇಗಿರಬಹುದು' ಎನ್ನುವುದು ಊಹೆ ಮಾತ್ರ. ಸಂಗೀತ- ಸಾಹಿತ್ಯ-ಕಲೆ ಹೇಗೆ ಜನಿಸಿತು? ಇದರ ಮೂಲವನ್ನು ಹುಡುಕಲು ಹೋದರೆ ಅಯೋಮಯವಾಗಿ ಕಾಣುವುದು. ಹುಡುಕಿ ಮುಗಿಸಲು ಸುಲಭವೂ ಅಲ್ಲ. ಎಷ್ಟು ಭಾಷೆಗಳು! ತರ-ತರದ ¸ಸಂಗೀತ!ಮಹಾನ್ ಎನಿಸುವ ವಿವಿಧ ಕಲೆಗಳು. ನಮಗೆ ಇವೆಲ್ಲವೂ ಹೇಗೆ ಬಂದಿತು ಎಂದರೆ ನಾವು ವೇದಗಳ ಕಾಲಕ್ಕೆ ಹೋಗಬೇಕು. 
      ವನರಾಜನ ಆರ್ಭಟ.. ಆನೆಯ ಬಲ.. ನರಿಯ ಬುದ್ಧಿಶಕ್ತಿ.. ಕೋಗಿಲೆಯ ಇಂಪು.. ಯಾವುದು ಮನುಷ್ಯನಿಗೆ ಇಲ್ಲ. ಭಾಷೆಯ ಬಲವಿಲ್ಲದೇ ಮನುಷ್ಯನು ತನ್ನ ಭಾವನೆಯನ್ನು ವ್ಯಕ್ತ ಪಡಿಸುವ ಒಂದೇ ಒಂದು ಮಾರ್ಗವೆಂದರೆ 'ಸನ್ನೆ'! ಈ ಸನ್ನೆ ಬರಲು ಕಾರಣ ಪ್ರಾಣಿಗಳೇ…!! ಪ್ರಾಣಿಗಳ ಅನುಕರಣೆಯೇ ಸನ್ನೆಗೆ ಮೂಲ. ಷಡ್ಜ-ನವಿಲು, ಋಷಭ-ಎತ್ತು, ಗಾಂಧಾರ-ಮೇಕೆ, ಮಧ್ಯಮ-ಕ್ರೌಂಚ, ಪಂಚಮ-ಕೋಗಿಲೆ, ದೈವತ-ಅಶ್ವ, ನಿಷಾದ-ಆನೆಗಳಿಂದ ಜನಿಸಿತು ಎಂದು  ಸಂಗೀತಶಾಸ್ತ್ರದ ಮೂಲವನ್ನು ಸಾಮವೇದ ವಿವರಿಸುವುದು. 
      ಕಾಡಾಡಿಯಾಗಿದ್ದ ಮನುಷ್ಯ ಪ್ರಾಣಿಗಳಿಗಿಂತಲೂ ಶಕ್ತಿ ಹೀನನಾಗಿ ಬದುಕಿದ! ಮನುಷ್ಯ ಒಂದಾಗಿ ಹೋರಾಡಿದ. ಪ್ರಾಣಿಗಳಿಗಿಂತ ಶಕ್ತಿ ಶಾಲಿಯಾಗಲು ಆತ ಒಂದು ಗೂಡಿದ. ಒಕ್ಕಟ್ಟಿನಿಂದ ಒಂದೊಂದೇ ಹೆಜ್ಜೆ ಮೇಲೇರಿದ.  ಹಸಿ ಮಾಂಸವನ್ನು ತಿನ್ನುವವ ಆಕಸ್ಮಿಕವಾಗಿ..ಮರಕ್ಕೆ ಮರ ತಿಕ್ಕಿ ಬೆಂಕಿ ಹೊತ್ತಿ ಕೊಂಡಾಗ ಅದರಲ್ಲಿ ಬೆಂದ ಮಾಂಸವನ್ನು ತಿಂದ. ಬೆಂದ ಮಾಂಸದ ರುಚಿಯನ್ನು ಕಂಡ. ಪ್ರಯೋಗ… ಹಾಗೂ ದೋಷ ನಿವಾರಣೆಯಿಂದ [Trial & Error] ಹೊಸ-ಹೊಸ ¸ಸಂಶೋಧನೆಯನ್ನು ಮಾಡುತ್ತ ಬಂದನು. ಆ ವೇಳೆ ಅವನ ಕೈಯಿಯಲ್ಲಿ ಬಂದ ಮುತ್ತಿನಂತಹ ಮಾತುಗಳೇ ಸುಭಾಷಿತವಾಗಿ, ವೇದವಾಗಿ ಹೊರಹೊಮ್ಮಿತು.

     ಋಗ್ವೇದವು ಮನುಷ್ಯನನ್ನು "1] ಪಶುತ್ತ್ವದಿಂದ ಮೇಲಕ್ಕೆತ್ತಿ 2] ಮಾನವನಾಗಿ ಬದುಕಲಿಕ್ಕೆ ಕಲಿಸಿ 3] ಮಾನವನ ಜೀವನವನ್ನು ಅರ್ಥಪೂರ್ಣಗೊಳಿಸಿ 4] ಮಾನವನಿಗೆ ದೇವನಾಗುವ 5] ಜೀವನದ ಕರ್ಮಭೂಮಿಯನ್ನೇ ದೈವೀಭಾವನೆಗಳ ಪುಣ್ಯಭೂಮಿಯನ್ನಾಗಿ ಮಾಡುವ ದಿವ್ಯಕಾರ್ಯಗಳನ್ನು ವೇದಗಳು ಕೈ ಗೊಂಡಿವೆ ಎಂದು" ಶ್ರೀ ಶೇಷ ನವರತ್ನರು ಹೇಳುವರು. ವೇದ ಸಂಶೋಧನೆಯಲ್ಲಿ ಅವರದು ದೊಡ್ಡ ಹೆಸರು.
        ‘ವಿದ್’ ಎಂಬ ಧಾತುವಿನಿಂದ ಬಂದ ವೇದದ ಅರ್ಥ ತಿಳಿ-ಜ್ಞಾನ. ‘ವೇದ’ ಅಂದರೆ ತಿಳಿದಜ್ಞಾನ. ವೇದದ ಪ್ರಕಾರ ಸೃಷ್ಟಿಯ ಮೂಲ ಶೂನ್ಯ! ಮಹಾಭಾರತದ ಪ್ರಕಾರ ‘ಮಹಾತೇಜ’ಎನ್ನುವ ಅಂಡವೇ ಮೂಲ. ಇದನ್ನು ಶಾಸ್ತ್ರ 'ಪರಬ್ರಹ್ಮ'ಎಂದು ಕರೆದಿದೆ. 
       ಅಗ್ನಿ ಉರಿಯಲು ಪ್ರಾಣವಾಯು ಬೇಕೆನ್ನುವುದು ವಿಜ್ಞಾನ! ಅಗ್ನಿಯೇ ಬ್ರಹ್ಮನ ಮುಖವೆನ್ನುವುದು ತತ್ತ್ವಜ್ಞಾನ. ಪ್ರಥ್ವಿ ಹದಿನೈದುಸಾವಿರ ವರ್ಷಗಳ ಹಿಂದೆ ಮಹಾಸ್ಫೋಟದಿಂದ ಆಗಿದೆ ಎನ್ನವುದು ವಿಜ್ಞಾನ. ‘ಬ್ರಹ್ಮ¸ಸಂಕಲ್ಪ’ವೆನ್ನುವುದು ತತ್ತ್ವಜ್ಞಾನ. ಗುರುತ್ವಾಕರ್ಷಣೆಯೇ ಸೌರವ್ಯೂಹದ ಅಡಿಪಾಯವೆನ್ನುವುದು ವಿಜ್ಞಾನ. ಸೃಷ್ಟಿಯೇ ವಿಚಿತ್ರ ಎನ್ನುವುದು ತತ್ತ್ವಜ್ಞಾನ.
       ‘ನಾಸಾ’ದವರ..... ಸಂಶೋಧನೆಯಂತೆ ಭೂಮಿಯ ಉಷ್ಣತಾಮಾನದಿಂದ ಎರಡು ಸಾವಿರ ಕಿಲೋಮೀಟರಿನ ಕೆಳಗಿರುವ ಸಾಗರದ ಶಿಲೆಯು ಒಡೆದು ಭೂಮಿಯ ಮೇಲಿನ ಅತಿವೃಷ್ಟಿ-ಅನಾವೃಷ್ಟಿ-ಸುನಾಮಿಗಳಿಗೆ ಕಾರಣವಾಗುವುದು. ಇದು ಆದಿಶೇಷನ ಕಲ್ಪನೆಯನ್ನು ತರುವುದು !
      ವಿಜ್ಞಾನ ದಿನ-ದಿನವೂ ಬೆಳೆಯುತ್ತಿದೆ. ವಿಜ್ಞಾನ ಕೆಲವನ್ನು ಸೃಷ್ಟಿಸುವುದು. ಸಂಶೋಧಿಸುವುದು. ಪ್ರಕೃತಿ ತನ್ನ ಗುಟ್ಟನ್ನು ಸಂಪೂರ್ಣವಾಗಿ ಬಿಟ್ಟುಕೊಡುವುದಿಲ್ಲ! ಇಂದಿನ ವಿಜ್ಞಾನವನ್ನು ಅಂದಿನ ವಿಜ್ಞಾನಕ್ಕೆ ಹೋಲಿಸಿದರೆ ಇಂದಿನ ವಿಜ್ಞಾನ ಸಮರ್ಥವಾಗಿ ಬೆಳೆಯಬೇಕಾಗಿದೆ. ವಿಜ್ಞಾನ-ತತ್ತ್ವಜ್ಞಾನಗಳ ನಡುವೆ ಬದುಕನ್ನು ಕಟ್ಟುವುದು ಮುಖ್ಯ.
     ವೇದ ಸುಳ್ಳಾದರೂ ಗಾದೆ ಸುಳ್ಳಲ್ಲ! ಎಂದರೆ... ವೇದಕ್ಕಿಂತಲೂ ಗಾದೆಯೇ ಶ್ರೇಷ್ಠವಾದುದು ಎನ್ನುವುದು ಸ್ಪಷ್ಟ! ವೇದವೂ ಅಪೌರುಷೇಯ! ಗಾದೆಯೂ ಅಪೌರುಷೇಯ. ಅಪೌರುಷೇಯ= [ಪುರುಷನಿಂದ] ಮನುಷ್ಯನಿಂದ ಮಾಡಲಾಗದ್ದು! ಅಂದರೆ ಅನುಭಾವದಿಂದ ತನ್ನಿಂದ ತಾನೇ ಉತ್ಪತ್ತಿ ಆದುದು.... ಎಂದು ಅರ್ಥವೇ ವಿನಃ ದೇವನಿರ್ಮಿತ ಎಂದು ಅಲ್ಲ! ವೇದವು ಅಪೌರುಷೇಯ ಎನ್ನುವರು! ಆದರೆ ಯಾವುದೇ ವೇದಮಂತ್ರಕ್ಕೂ ಛಂದಸ್ಸು-ದ್ರಷ್ಟಾರ-ಋಷಿಗಳ ಹೆಸರಿಲ್ಲದೇ ಇಲ್ಲ! 
  ಹಿಮಾಲಯ ಹೀಗಿದೆ ಎಂದು ಪುಸ್ತಕದಲ್ಲಿ ಓದಿದ್ದೋ.. ಯಾರಿಂದಲೋ ಕೇಳಿದ್ದೋ.. ಅನುಭವ! ಹಿಮಾಲಯವನ್ನು ನೋಡುವುದು ಪ್ರತ್ಯಕ್ಷ ಅನುಭೋಗ! ವಿಷಯ-ವಸ್ತುವನ್ನು ಕಂಡು ಅದರಿಂದ ಪಡೆದ – ಅನುಭದ ಅನುಭೋಗವೇ ಅನುಭಾವ! ಅನುಭಾವದಿಂದ ಎಲ್ಲವನ್ನೂ ಪೃಥಕ್ಕರಿಸಿ ವೇದ ವಿಜ್ಞಾನವನ್ನು ನೋಡೋಣ… .



No comments:

Post a Comment

ಹೆಸರಿಗೂ ಪುರಾಣವೇ?

  Kavita Gireesh   "ಹೆಸರಿಗೂ ಪುರಾಣವೇ"        ಪಕ್ಕದ ಮನೆಯಲ್ಲಿ ನಾಮಕರಣ   ನಾಮಕರಣ ಅಂತ ಪಕ್ಕದಮನೆ ನಾರ್ತ್ ಇಂಡಿಯನ್ ಫ್ಯಾಮಿಲಿಯವರು ಬೆ...